ವಿಷಯಕ್ಕೆ ಹೋಗು

ಪುಟ:Putina Samagra Prabandhagalu.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೫

ಭೀತಿಮೀಮಾಂಸೆ

``ಕನ್ನಡ ನುಡಿಯ ವಿಶೇಷ ಸಂಚಿಕೆಗೆ ಏನು ಬರೆಯೋಣ ಎಂದು ಆಲೋಚಿಸುತ್ತಿದ್ದಾಗ, ಮನಸ್ಸಿಗೆ ಗೆಲುವಾದ ಯಾವ ವಿಷಯವೂ ಬರಲಿಲ್ಲ. ಅನೇಕ ಪ್ರಶ್ನೆಗಳು ಮಾತ್ರ ತಲೆ ಹಾಕಿದುವು. ಐಶ್ವರ್ಯವಂತರಿಂದ ಬಡವರಿಗೆ ತೊಂದರೆಯೋ, ಬಡವರಿಂದ ಬಡವರಿಗೆ ತೊಂದರೆಯೋ? ಇದನ್ನು ಆಲೋಚಿಸಿ ನಾನು ಬಡವರಿಂದಲೇ ಬಡವರಿಗೆ ತೊಂದರೆ ಎಂಬ ನಿರ್ಧಾರಕ್ಕೆ ಬಂದೆ. ಈ ವಾದಸರಣಿ ಕ್ರಾಂತಿಕಾರಕವಾದುದರಿಂದ ನಾನು ಇಲ್ಲಿ ಈಗ ಬರೆಯುವುದಕ್ಕೆ ಅಂಜುತ್ತೇನೆ. ಅಂಜಿಕೆಯ ಮಾತು ಬಂದಿತಲ್ಲಾ. ಜಗತ್ತು ಯಾರಿಂದ ನಡೆಯುತ್ತದೆ ಎಂಬ ಪ್ರಶ್ನೆಗೆ, ಅಂಜಿ ನಡೆಯುವವರಿಂದಲೇ ಎಂಬ ಉತ್ತರ ಸದುತ್ತರವಲ್ಲವೇ? ಇಲ್ಲಿ ಕ್ರಾಂತಿಯ ಮಾತಿಲ್ಲ. ಶಕ್ತಿ ಪೂಜೆಯ ಈ ಉತ್ಸವ ದಿನಗಳಲ್ಲಿ ಇದರ ವಿವೇಚನೆಯನ್ನು ನಾನು ಏಕೆ ಸ್ವಲ್ಪ ಮಾಡಬಾರದು. ತಾಳಿದವ ಬಾಳಿಯಾನು-ಸರಿಯೆ, ಯಾರಿಲ್ಲವೆಂದರು? ಆದರೆ ಅಂಜುವವ ತಾನೆ ತಾಳಿಯಾನು! ಬಾಳಬೇಕೆಂಬ ಆಸೆಯ ತಳಹದಿಯಲ್ಲಿಯೇ ಅಂಜಿಕೆಯ ಅಸ್ತಿಭಾರವಿದೆ. ಜೀವನಮೀಮಾಂಸೆಗೆ ಈ ಭಯದ ವೇದಾಂತ ಬಹಳ ಮುಖ್ಯ.

ಭಯವನ್ನು ಯಾಕೆ ದುರ್ಗುಣವೆಂದು ಕರೆದರೋ, ಧೈರ್ಯ ಏಕೆ ಸದ್ಗುಣವಾಯಿತೋ, ನನಗಂತೂ ಇನ್ನೂ ಅರ್ಥವಾಗಿಲ್ಲ. ಭಯದಿಂದ ಧೈರ್ಯ ಹುಟ್ಟಿತೋ, ಧೈರ್ಯದಿಂದ ಭಯ ಹುಟ್ಟಿತೋ ಹೇಳುವವರಿದ್ದಾರೆಯೇ? ತುಪ್ಪಕ್ಕೆ ದೊನ್ನೆ ಆಧಾರವೋ, ದೊನ್ನೆಗೆ ತುಪ್ಪವೋ ಎಂಬ ತರ್ಕದಷ್ಟು ಸುಲಭವಲ್ಲ ಈ ಸಮಸ್ಯೆ. ಮೊಟ್ಟೆಯಿಂದ ಕೋಳಿಯೋ ಕೋಳಿಯಿಂದ ಮೊಟ್ಟೆಯೋ ಎನ್ನುವಷ್ಟು ಗಹನ.

ಬ್ರಹ್ಮಾಂಡದ ಸೃಷ್ಟಿ ಲಯಗಳಿಗೆ ಭಯ ಕಾರಣವೋ ಅಲ್ಲವೋ ನನಗೆ ತಿಳಿಯದು. ಅದರ ಸ್ಥಿತಿಗಂತೂ ಭಯವೇ ಮೂಲಕಾರಣ. ಭಯದಲ್ಲಿ ವೈಷ್ಣವಾಂಶವಿದೆ. ``ಭಯಾದಗ್ನಿಸ್ತಪತಿ, ``ತೇನ ವಿನಾ ತೃಣಮಪಿ ನ ಚಲತಿ ಇತ್ಯಾದಿ ಶ್ರುತಿವಾಕ್ಯ ಪ್ರಮಾಣಗಳಿಂದಲೂ ಮತ್ತು ``ಭಯಂಚಾಭಯಮೇವ ಚ ಎಂಬ ಗೀತೋಪನಿಷತ್ತಿನ ಭಗವದ್ವಾಕ್ಯಗಳಿಂದಲೂ ಇದು ಸಿದ್ಧ. ಭಯವೆಂದರೆ