ಪುಟ:Putina Samagra Prabandhagalu.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋಕುಲಾಷ್ಟಮಿ

ಯಾಗಬೇಕೇನು? ಬೆಂದ ಕರುಳಿನ ಮಾತೆಯ ಶೋಕದ ಝರಿಯನ್ನು ವಸುದೇವನ ಸಮಾಧಾನದ ಮಾತುಗಳು ತಡೆಯಲಾರವು. ಇವನ್ನು ಕೊಚ್ಚಿಕೊಂಡು ಹೋಗಿ ವಸುದೇವನನ್ನೂ ಈ ಶೋಕ ತಾಗುತ್ತದೆ. ಆತನೂ ಅಧೀರನಾಗುತ್ತಾನೆ. ಸೆರೆಮನೆಯಲ್ಲಿ ಕತ್ತಲು ಕವಿದಿದೆ. ಈ ದಂಪತಿಗಳ ಹೃದಯದಲ್ಲೂ ನಚ್ಚಳಿದು ಇರುಳು ಮೂಡಿದೆ.

ಪುರಾಣ ಓದುತ್ತಾ ಓದುತ್ತಾ ತಂದೆಯವರ ಸುಸಂಸ್ಕೃತ ಹೃದಯವು ಕೋಮಲವಾಗುತ್ತದೆ. ಮೃದುಭಾವಗಳು ಮನದಲ್ಲಿ ಸುಳಿಯುತ್ತವೆ. ನೆನಪುಗಳ ದಾಳಿಯಿಡುತ್ತವೆ. ಆ ಭಾವಗಳಿಗೂ ಈ ಕಥೆಗೂ ಸಂಬಂಧವುಂಟು. ದೇವಕೀದೇವಿ ವಸುದೇವರುಗಳ ಶೋಕವನ್ನು ತಮ್ಮ ಅನುಭವದಿಂದ ಅಳೆದು ಆತ್ಮೀಕರಿಸಿಕೊಳ್ಳುವ ಭಾವವದು. ಈ ಭಾವಕ್ಕೆ ಅವರು ಆಗಾಗ ಪುರಾಣ ಓದುವುದನ್ನು ನಿಲ್ಲಿಸಿ, ನುಡಿಗೊಡುತ್ತಿದ್ದಾರೆ. - "ಹಸುವಿಗೆ ಹುಲ್ಲು ಹಾಕಿದಿರಾ ?... ಪಾಪ ಮಕ್ಕಳು ಹಸಿದಿರಬೇಕು, ಸೊರಗಿ ನಿದ್ದೆ ಹೋಗುತ್ತಿದಾರೆ... ಈ ಬೆಕ್ಕಿಗೆ ಬೆಳಗಿನಿಂದಲೂ ಅನ್ನವಿಲ್ಲ. ಸ್ವಲ್ಪ ಹಾಲನ್ನಾದರೂ ಅದರ ಚಿಪ್ಪಿಗೆ ಬಿಡಬಾರದಾಗಿತ್ತೆ.... ಈ ವರ್ಷ ಮಗು ಬಂದಿದಾನೆ, ಹೋದ ವರ್ಷ ಇನ್ನೆಲ್ಲೋ ಅಲೆಯುತಾ ಇದ್ದ, ಪಾಪ... ಅಯ್ಯೊ ಪಾಪ, ಆ ಮಗು ಆಸ್ಪತ್ರೆಯಲ್ಲಿ ಎಷ್ಟು ಕಷ್ಟಪಡುತ್ತಿದೆಯೋ ಕಾಣೆ, ಸೀತುವಿಗೂ ಸುಖವಿಲ್ಲ. (ಸೀತು ನನ್ನ ಅಕ್ಕ; ಆ ಮಗು ಅವಳ ಹತ್ತು ವರ್ಷದ ಹುಡುಗ.)...." ಹೀಗೆ ಪುರಾಣ ಪಾರಾಯಣದ ಮಧ್ಯೆ ತಂದೆಯವರಾಡುವ ನುಡಿಗಳಿಗೆ ಯಾರೂ ಮರುನುಡಿ ಕೊಡುವುದಿಲ್ಲ. ನಮ್ಮ ಉತ್ತರವನ್ನು ಅವರು ಅಪೇಕ್ಷಿಸುವುದಿಲ್ಲವೆಂದೂ ನಮಗೆ ಗೊತ್ತು. ಈ ಮಾತುಗಳೆಲ್ಲವೂ ಅವರ ಭಾವೋದ್ರೇಕದ ಕಾಲುವೆಗಳು. ಹೀಗೆ ಪುರಾಣ ಮುಂದೆ ಸಾಗಿ ಕೃಷ್ಣ ಜನನ ಘಟ್ಟದ ಹತ್ತಿರಕ್ಕೆ ಬರುತ್ತದೆ. ಆಗ ನನ್ನ ತಂಗಿಯ ಕೂಸು ಮಗುಚಿಕೊಳ್ಳಲು ಪ್ರಯತ್ನಪಟ್ಟು, ಉತ್ಸಾಹದಿಂದ ಕೇಕೆಹಾಕಿ ನಗುತ್ತದೆ. ಆ ಕೇಕೆ ನಮ್ಮ ತಂದೆಯವರ ಕಿವಿಗೆ ಬೀಳುತ್ತದೆ. ಅವರು ದೃಷ್ಟಿಯನ್ನು ಕನ್ನಡಕದಿಂದ ಮೇಲಕ್ಕೆತ್ತಿ, ಕೂಸನ್ನು ನೋಡುತ್ತಾರೆ. ಅವರ ಮುಖದಲ್ಲಿ ಹರುಷದ ನಗೆಯೊಂದು ಹರಡಿಕೊಳ್ಳುತ್ತದೆ. ದೂರದಿಂದಲೇ ಮಗುವಿನ ದೃಷ್ಟಿಯನ್ನು ತಮ್ಮ ಕಡೆಗೆ ಎಳೆದುಕೊಳ್ಳಲು ದನಿಗೈದು, ಅದು ಆ ಕಡೆ ತಿರುಗಲು, ಅದರೊಡನೆ ಮಾತಾಡಿ, ಅಪೂರ್ವವಾದ ಸುಖವೊಂದನ್ನು ಸವಿದು, "ಈ ಕೂಸೇನು ಸಾಮಾನ್ಯ ಮನುಷ್ಯರದು; ಅಸಾಧಾರಣ ರೂಪವಿಲ್ಲ, ಗುಣಗಳಿಲ್ಲ. ಆದರೂ ಇದರ ಆಟಗಳಿಗೆ ಮನಸ್ಸೆಷ್ಟು ಮೋಹಗೊಳ್ಳುತ್ತದೆ; ಇನ್ನು ಆ ದೇವಶಿಶು ಎಷ್ಟು ಚೆನ್ನಾಗಿದ್ದಿರಬಹುದು ! ಅದರ ಆಟಗಳಿನ್ನೆಷ್ಟು