ಪುಟ:Putina Samagra Prabandhagalu.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪು.ತಿ.ನ ಸಮಗ್ರ


ಮುದ್ದಾಗಿರಬಹುದು. ನಂದಗೋಪ ಯಶೋದೆಯರೂ, ನಂದಗೋಕುಲದ ಪೂಜೆಗಳೂ, ಈ ಮುದ್ದಿನ ಸೋಗಿಗೆ ಹುಚ್ಚಾದುದರಲ್ಲಿ ಆಶ್ಚರ್ಯವೇನು" ಎನ್ನುತ್ತಾರೆ. ಈ ಮಾತು ಕೇಳಿ ನಮ್ಮ ದೃಷ್ಟಿ ಆ ಕೂಸಿನ ಕಡೆಗೆ ಹೊರಳುತ್ತದೆ. ಪುಟ್ಟ ಮುದ್ದು ಕೂಸು-ಹೌದು, ಅವರು ಹೇಳಿದ್ದು ನಿಶ್ಚಯ-ಆ ನಂದ ವ್ರಜದ ಶಿಶು ಇನ್ನೆಷ್ಟು ಮುದ್ದಾಗಿರಬಹುದು ! ಈ ಹಸುಳೆ, ಈ ಮಾತು ಆ ಸನ್ನಿವೇಶಕ್ಕೆ ಒಂದು ಹೊಸ ಪೂಭೆಯನ್ನು ಬೀರುತ್ತವೆ. ಸೆರೆಮನೆಯಲ್ಲಿ ಕೃಷ್ಣನವತಾರವಾದುದರ ಭಾವ ನಮ್ಮೆಲ್ಲರಲ್ಲಿಯೂ ಮೊಳೆಯುತ್ತದೆ. ಅಷ್ಟು ಹೊತ್ತಿಗೆ ಪುರಾಣ ಮುಂದುವರಿದು ಕೃಷ್ಣ ಜನನವಾಗಿ ತಂದೆಯವರು ಗಂಟೆಯನ್ನು ಬಾರಿಸಿ ಮಂಗಳಾರತಿ ಎತ್ತುತ್ತಾರೆ. ಹುಡುಗರೆಲ್ಲಾ ಗಾಬರಿಗೊಂಡು ಎಚ್ಚತ್ತು ಅಘರ್ಯ್‌ ಕೊಡುವ ಹೊತ್ತಿಗೆ ನಿದ್ದೆ ಪೂರ್ಣವಾಗಿ ತಿಳಿದು ಕೈಕಟ್ಟಿ ನಿಲ್ಲುತ್ತಾರೆ. ಆ ವೇಳೆಗೆ ರೋಹಿಣಿಯೊಡಗೂಡಿ ಚಂದ್ರ ಮೈದೋರುತ್ತಾನೆ. ಹೊರಗೆ ಹೋಗಿ ಆ ಕಿಶೋರಚಂದ್ರನಿಗೆ ಅಘರ್ಯ್‌ ಸಮರ್ಪಿಸಿ, ಒಳಗಡೆ ಬಾಲಕೃಷ್ಣನಿಗೂ, ಬಲರಾಮನಿಗೂ ಅಘರ್ಯ್‌ ಕೊಟ್ಟು ಭಕ್ಷ್ಯಗಳನ್ನು ನಿವೇದಿಸುತ್ತಾರೆ. ಅಲ್ಲಿಗೆ ಕೃಷ್ಣಜನನ ಘಟ್ಟ ಸಂಪೂರ್ಣವಾಗುತ್ತದೆ. ಹುಡುಗರ ಬಾಯ ಕುಕ್ಕೆ ಬಿಚ್ಚುತ್ತದೆ. ಅವರ ಆನಂದಲಹರಿ ಹರಿಯತ್ತದೆ. ಹೀಗೆ ಅಂದು ನಮ್ಮ ಮನೆಯಲ್ಲಿ ಕೃಷ್ಣಜನನವಾಯಿತು. ಪೂತಿವರ್ಷದಲ್ಲೂ, ಪೂತಿ ಗೃಹದಲ್ಲೂ ಪೂತಿ ಕುಟುಂಬದಲ್ಲೂ, ಕೃಷ್ಣ ಶಿಶು ಹುಟ್ಟುತ್ತಲೇ ಇರುತ್ತಾನೆ, ಭಾರತ ಧರ್ಮವು ಭಾರತ ವರ್ಷದಲ್ಲಿ ಉಳಿದಿರುವವರೆಗೂ. ಆತನೊಂದಿಗೆ ದೊಡ್ಡ ನಚ್ಚೊಂದು ಹುಟ್ಟುತ್ತದೆ-ನೂತನ ಶ್ರದ್ಧೆಯೊಂದು, ಉತ್ಸಾಹವೊಂದು, ಸಂತೋಷವೊಂದು, ನೆಮ್ಮದಿಯೊಂದು ನೂತನ ಧ್ಯೇಯವೊಂದು. ಈ ನಚ್ಚು ಶ್ರದ್ಧಾವಂತನ ಬೆನ್ನುಹಿಡಿದು ಕೊನೆಯವರೆಗೂ ಬರುತ್ತದೆ. ಸಂಸಾರೋತ್ತರಣ ಕಾರ್ಯದಲ್ಲಿ ನೆರವಾಗುತ್ತದೆ. ಸೆರೆ ಮನೆಗೆ ಬೆಳಕಾಗುತ್ತದೆ. ಬೆಳಕಿರುವ ಮನೆಗೆ ನೂತನ ಪೂಭೆ ಕೊಡುತ್ತದೆ. ಈ ನಚ್ಚು, ನಮ್ಮ ಪಿತ್ರಾರ್ಜಿತವಾದ, ಯಾರಿಂದಲೂ ಕದಿಯಲಾಗದ, ಎಂದೂ ನಶಿಸದ, ಸಂಸಾರಕ್ಕೆ ಸಾರಭೂತವಾದ ಆಸ್ತಿ-ಈ ಶ್ರೀಕೃಷ್ಣ ಜನನದ ನಚ್ಚು.