ಪುಟ:Rangammana Vathara.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

93

ಒಮ್ಮೆ ಸೂರ್ಯ ಮರೆಯಾದನೆಂದರೆ ಕತ್ತಲು ಧಾವಿಸಿ ಬರುವುದು ಎಷ್ಟು
ಬೇಗನೆ!
ಜಯರಾಮು ಮನೆಯ ಕಡೆಗೆ ಹೊರಟ.
ರೈಲು ಹಾದಿ, ಒಂಟೆ ಮರ. ಕಾವಲು ಮನೆ, ನಿಲ್ದಾಣ...
ಎಡಬದಿಯಲ್ಲಿದ್ದ ಎತ್ತರದೊಂದು ದೊಡ್ದ ಮನೆಯಿಂದ ರೇಡಿಯೋ
ಹಾಡುತ್ತಿತ್ತು:
"ದುನಿಯಾ ರಂಗ್ ರಂಗೇಲಿ ಬಾಬಾ, ದುನಿಯಾ ರಂಗ್ ರಂಗೇಲಿ."
ಅದು ಯಾರ ಕಂಠವೋ ಜಯರಾಮುವಿಗೆ ತಿಳಿಯದು. ಆತನ ಮನೆಯಲ್ಲೇನೂ
ರೇಡಿಯೋ ಇರಲಿಲ್ಲ. ಆತ ಚಲಚ್ಚಿತ್ರಗಳ ಹುಚ್ಚನೂ ಅಲ್ಲ. ಮುಖ್ಯವಾಗಿ,
ಅಂತಹ ಹುಚ್ಚಿಗೆಲ್ಲ ಅಗತ್ಯವಾಗಿ ಬೇಕಾಗುವ ಹಣ ಅವನಲ್ಲಿರಲಿಲ್ಲ.
ಒಂದು ಸಂಸಾರಕ್ಕೆ ಒಳ್ಳೆಯ ಪುಸ್ತಕ ಭಂಡಾರದಷ್ಟೇ ಒಂದು ರೇಡಿಯೋ ಕೂಡ
ಆಗತ್ಯವೆಂಬುದು ಜಯರಾಮುವಿನ ಅಭಿಪ್ರಾಯವಾಗಿತ್ತು.
ಹಾಡು ಎಂದರೆ ಪ್ರಾಣಬಿಡುವ ರಾಧಾ ಎಷ್ಟೋ ಸಾರೆ ಹೇಳಿದ್ದಳು:
"ಅಣ್ಣಾ, ಒಂದು ರೇಡಿಯೋ ಇದ್ದರೆ ಚೆನ್ನಾಗಿರುತ್ತೆ, ಅಲ್ವಾ?"
ಅ ಕೊಠಡಿ ಮನೆಗೆ ಆದೊಂದು ಐಶ್ವರ್ಯ ಬೇರೆ-ರಂಗಮ್ಮನ ವಠಾರಕ್ಕೆ
ರೇಡಿಯೋ!
ವಠಾರದತ್ತ ನಡೆಯುತ್ತ ಜಯರಾಮು ಯೋಚಿಸಿದ:
'ಸಾಕಷ್ಟು ಸಂಪಾದನೆ ಇರುವವನೇ ತನ್ನ ತಂಗಿಗೆ ಗಂಡನಾಗಿ ದೊರೆತರೆ? ಒಂದು
ರೇಡಿಯೋ ಕೊಂಡುಕೊಳ್ಳುವ ಸಾಮರ್ಥ್ಯವಿರುವ ಪುಟ್ಟ ಸಂಸಾರಕ್ಕೇ ಆಕೆ ಗೃಹಿಣೆ
ಯಾದರೆ?'
ಜಯರಾಮು ಮನೆ ಸೇರಿದಾಗ ಅವನ ತಂದೆ ಊಟಕ್ಕೆ ಕುಳಿತುಕೊಂಡಿದ್ದರು. ಮಗನನ್ನು
ನೋಡಿ ಅವರೆಂದರು:
"ಅದೆಷ್ಟೊತ್ತೋ ಮನೇಗ್ಬರೋದು? ಹೂಂ... ಕೈಕಾಲು ತೊಳಕೊಂಡು ಬಾ."
ಮಗನಿಗೂ ತಾಯಿ ಬಟ್ತಲಿಟ್ಟಳು.