ಪುಟ:Rangammana Vathara.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

96

ಸೇತುವೆ

ನೋಡಿದವರಿಗೋ ಅವರ ಹಿರಿಯರಿಗೋ ಆಕೆ ಒಪ್ಪಿಗೆಯಾಗಿರಲಿಲ್ಲ. ಯಾರಾದರೂ
"ಹಾಡು" ಎಂದಾಗಲೆಲ್ಲ, ತಾನು ತಲೆ ತಗ್ಗಿಸಿಕೊಂಡು ಎರಡು ಕಡೆ ಹಾಡಿದ್ದ ನೆನಪು
ಆಕೆಗೆ ಆಗುತ್ತಿತ್ತು.
"ಎಲ್ಲಿ, ಹೇಳಮ್ಮಾ."
ಅಹಲ್ಯಾ ಕಣ್ಣೆವೆಗಳನ್ನು ಕುಣಿಸುತ್ತ ಅಂದಳು:
"ನೀವೂ ಒಂದು ಹಾಡೋ ಹಾಗಿದ್ರೆ, ನಾನು ಹಾಡ್ತೀನಿ."
"ನಾನು! ನಂಗೆ ಬರೋಲ್ವಮ್ಮ."
"ಬೂಶಿ ಬಿಡ್ತಿದೀರಾ. ಘಾಟಿ ಕಣ್ರಿ ನೀವು."
ಹುಡುಗಿಯ ಬಾಲಭಾಷೆ ತಮಾಷೆಯಾಗಿ ತೋರಿತು, ಮಗುವನ್ನೆತ್ತಿಕೊಂಡಿದ್ದ
ಚಂಪಾವತಿಗೆ.
"ನಿಜವಾಗ್ಲೂ ನಂಗೆ ಹಾಡೋಕೆ ಬರೋಲ್ಲ ಅಹಲ್ಯಾ."
"ಸುಳ್ಳು! ಸುಳ್ಳು!"
ಒಂದು ಕ್ಷಣ ಸುಮ್ಮನಿದ್ದು ಮುಗುಳ್ನಕ್ಕು ಚಂಪಾ ಹೇಳಿದಳು;
“ಆಗಲಮ್ಮ. ಒಪ್ದೆ : ನೀನು ನಗಬಾರು ನೋಡು."
ಚಿತ್ರಕಾರನ ಹೆಂಡತಿಗೆ ಹಾಡುಗಾರಿಕೆ ಖಂಡಿತವಾಗಿಯೂ ಗೊತ್ತಿರಬೇಕೆಂದು
ತಾನು ಮಾಡಿದ್ದ ಊಹೆ ಸರಿಯೆ ತಪ್ಪೆ ಎಂದು ತಿಳಿಯುವ ಹೋತ್ತು ಬ೦ತೆoದು,
ಅಹಲ್ಯೆಗೆ ಸಂತೋಷವಾಯಿತು. ಚಂಪಾವತಿಯ ಹಾಡನ್ನು ಕೇಳುವ ತವಕದಲ್ಲೆ
ಇದ್ದ ಆಕೆಯೆಂದಳು:
"ಯಾವುದು ಹೇಳ್ಲಿ?"
"ಯಾವುದಾದರೂ."
ಅಹಲ್ಯಾ, ದೇವರ ನಾಮದ ಬದಲು ತಾನು ಪ್ರೀತಿಸಿದ ಬೇರೊಂದು ಹಾಡ
ನ್ನೆತ್ತಿಕೊಂಡಳು:
"ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು
ಕಲೆಯ ಬಲೆಯು..."
ಆ ಚರಣ ಮುಗಿದಾಗಲೊಮ್ಮೆ ಅಹಲ್ಯಾ ಚಂಪಾವತಿಯನ್ನು ದಿಟ್ಟಿಸಿ ನೋಡಿ
ದಳು. ಬಳಿಕ, ಗೋಡೆಯ ಒಂದು ಮೂಲೆಯತ್ತ ಕನಸು ಕಾಣುತ್ತಿದ್ದವಳಂತೆ
ನೋಡುತ್ತ, ಆಕೆ ಹಾಡಿದಳು.
ಕೇಳುತ್ತಿದ್ದವರ ಹೃದಯದ ತಂತಿಗಳನ್ನು ವಟುತ್ತಿದ್ದ ಮಧುರ ಸ್ವರ, ಭಾವ
ಪೂರ್ಣವಾದ ಅರ್ಥಪೂರ್ಣವಾದ ಮಾತುಗಳು. ಚಂಪಾ ತನ್ಮಯಳಾಗಿ ಕೇಳಿದಳು.
ನಿಂತಿದ್ದವಳು ಅಹಲ್ಯೆಗೆದುರು ಗೋಡೆಗೆ ಒರಗಿ ಕುಳಿತು ಕೇಳಿದಳು. ಆಕೆಯ ಮಗುವೂ
ತಾಯಿಯ ಎದೆಯ ಮೇಲೆ ತಲೆಯಿಟ್ಟು ಬೆಟ್ಟು ಚೀಪುತ್ತ, ಅಹಲ್ಯೆಯನ್ನೇ ನೋಡಿತು.
ಅಹಲ್ಯೆಯ ತಾಯಿಯೊಮ್ಮೆ ತನ್ನ ಬಾಗಿಲ ಬಳಿ ನಿಂತು ಹೋದಳು.