ಪುಟ:Rangammana Vathara.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

104

ಸೇತುವೆ

"ನಚೊ ನಾಚೊ ಪ್ಯಾರೆ ಮನ್ ಕೆ ಮೋ....
ನಚೊ ನಾಚೊ..."
ಅಹಲ್ಯಾ ರಾಧೆಯರು ನಾಚಲಿಲ್ಲ. ಆ ಹಾಡಿನ ಅರ್ಥವೇನೆಂಬುದೂ ಅವರಿಗೆ
ಗೊತ್ತಿರಲಿಲ್ಲ. ಆದರೆ ಅದು ಸಿನಿಮಾ ಹಾಡು. ಅವರಿಗೆ ಗೊತ್ತಿದ್ದುದಷ್ಟೇ.
ಅದೊಂದು ಒಳ್ಳೆಯ ಸಿನಿಮಾ ಹಾಡು.
ಹಾಡು ಕೊನೆಯ ಸಾಲು ಬಂದಂತೆಯೇ ದೀಪ ಹತ್ತಿಕೊಂಡಿತು.
"ಸಾಕಮ್ಮಾ, ಇನ್ನು ಸಾಕು," ಎಂದಳು ಚಂಪಾ.
ರಾಧೆ ಅಹಲ್ಯೆಯರು ಹೊರಡಲೆಂದು ಬಾಹಿಲು ತೆರೆಯುವುದಕ್ಕೂ "ಅಹಲ್ಯಾ"
ಎಂದು ಆಕೆಯ ಅಣ್ಣ ರಾಮಚಂದ್ರಯ್ಯ ಕರೆಯುವುದಕ್ಕೂ ಸರಿ ಹೋಯಿತು.
ಹೊರಡುತ್ತಲಿದ್ದ ಅಹಲ್ಯೆಯನ್ನು ಚಂಪಾವತಿ ಕೇಳಿದಳು:
"ಅಹಲ್ಯಾ, ಆ ಹಾಡು ನಿನಗೆಲ್ಲಿ ಸಿಕ್ತೆ?"
"ಯಾವುದ್ರಿ?"
"ಅದೇ, ಒಳಗೆ ಬಾ ಯಾತ್ರಿಕನೆ...."
"ಓ ಅದಾ? ರಾಧೆಯ ಅಣ್ಣ ಯಾವುದರಲ್ಲೋ ನೋಡಿ ಬರಕೊಂಡು ಬಂದಿ
ದ್ನಂತೆ."
"ನನಗೂ ಸ್ವಲ್ಪ ಬರಕೊಡ್ತೀಯಾ?"
"ನಾನು ಬರಕೊಡ್ತೀನ್ರೀ," ಎಂದು ರಾಧಾ ಆ ಕೆಲಸ ಮಾಡಿಕೊಡಲು
ಒಪ್ಪಿದಳು.
ಹುಡುಗಿಯರು ಹೊರಹೋಗುತ್ತಲೆ ಚಂಪಾವತಿ ತಾನು ಮೆಚ್ಚಿದ ಆ ಹಾಡಿನ
ಮೊದಲ ಸಾಲನ್ನು ನೆನಪು ಮಾಡಿಕೊಳ್ಳುತ್ತಾ ಗುಣಗುಣಿಸಿದಳು.
"ಅವರಿಗೆ ಈ ಹಾಡು ಖಂಡಿತ ಇಷ್ಟವಾಗುತ್ತೆ", ಎಂದು ಆಕೆ ಮನಸ್ಸಿನಲ್ಲೆ
ಅಂದುಕೊಂಡಳು.

೧೦
ಮಹಡಿಯೇರಲೆಂದು ರಾಧಾ ಹೆಬ್ಬಾಗಿಲಿನತ್ತ ಬರುತ್ತಲಿದ್ದಂತೆ ಬಲಬದಿಯ
ಮೊದಲ ಮನೆಯಿಂದ ರೋದನ ಕೇಳಿಸಿತು.
"ಅಯ್ಯೋ ಹೊಡೀಬೇಡೀಂದ್ರೆ....ನಿಮ್ಮ ದಮ್ಮಯ್ಯ!"
ಹುಂ-ಹುಂ-ಹೂಂಕಾರ. ಡುಬ್-ಡುಬ್-ಗುದ್ದಿನ ಸದ್ದು.
"ಅಯ್ಯಯ್ಯೋ-ಅಮ್ಮಾ!ಸತ್ತೆ-ಸತ್ತೆ....."