ಪುಟ:Rangammana Vathara.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

105

ಆ ಮನೆಯಿಂದ ಹಾಗೆ ಅಳು ಬರುವುದು ಹೊಸ ವಿಷಯವಾಗಿರಲಿಲ್ಲ.
ಅದೊಂದು ಮನೆ, ಎದುರಿಗಿದ್ದ ಉಪಾಧ್ಯಾಯರದು, ಪಕ್ಕದಲ್ಲಿ ರಾಜಮ್ಮ ಮತ್ತು
ಮಕ್ಕಳ ಜಗಳ, ಕಮಲಮ್ಮನ ಗಂಡ ಊರಿಗೆ ಬಂದಾಗಲೊಂಮ್ಮೆ ವಿರಸ,ನಾಗರಾಜ
ರಾಯ-ಪದ್ಮಾವತಿಯರ ನಡುವೆ ಹುಣ್ಣಿಮೆ ಅಮಾವಾಸ್ಯೆಗೊಮ್ಮೆ ಕಲಹ...ಯಾವುದೂ
ಹೊಸತಾಗಿರಲಿಲ್ಲ, ಯಾರಿಗೂ ಅದರಲ್ಲಿ ವಿಶೇಷ ಅಸಕ್ತಿ ಇರಲಿಲ್ಲ. 'ಎಲ್ಲರ ಮನೆ
ದೋಸೆಯೂ ತೂತೇ' ಎಂದು ಸುಮ್ಮನಾಗುವುದೇ ಅಲ್ಲಿ ಕಂಡುಬರುತ್ತಿದ್ದ ಮುಖ್ಯ
ಪ್ರವ್ರತ್ತಿ. ಆದರೂ ಹೊಸ ಪ್ರಕರಣವಾದಾಗಲೆಲ್ಲ 'ಈ ಸಲ ಕಾರಣವೇನು?' ಎಂದು
ತಿಳಿಯುವ ಕುತೂಹಲ ಮಾತ್ರ ಹಲವರಲ್ಲಿ ಇರುತ್ತಿತ್ತು.
ಈ ಸಲವು ಮೊದಲ ಮನೆಗಳ ಕೆಲವರು,ಪೋಲೀಸನ ಮನೆಯಿಂದ ಬರು
ತ್ತಿದ್ದ ಸ್ವರಗಳಿಗೆ ಕಿವಿಗೊಟ್ಟರು.
"ಸ್ವಲ್ಪಾನಾದ್ರೂ ಮೈಮೇಲೆ ಪ್ರಜ್ನೆ ಬೇಡ ನಿಂಗೆ? ಹೋಗಿ ಸಂಗೀತ ಕಛೇರೀಲಿ
ಕೂತ್ಬಿಟ್ಟಿದಾಳೆ ಮಹಾರಾಣಿ. ಹುಂ!"
"ಇಲ್ಲಾ ಅಂದ್ರೆ....ಈಗ್ತಾನೇ ಹೋಗಿದ್ದೆ ಅಂದ್ರೆ..."
"ಮುಚ್ಚು ಬಾಯಿ!"
"ಅಯ್ಯೋ ಭಗವಂತಾ...."
ಭಗವಂತನನ್ನು ಕರೆದುದಕ್ಕಾಗಿ ಒದೆ.
"ಯಾರ್ಗೆ ಹೇಳಿದ್ದು ಬಾಯ್ಮುಚ್ಚೂಂತ?"
ಆ ಗಂಡಸು ಒಂದು ಕ್ಷಣ ಅಳುಕಿದಂತೆ ತೋರಿತು. ಮತ್ತೆ ಕೈಯ ಹೊಡೆತ.
"ನಿಮ್ಮ ದಮ್ಮಯ್ಯ....!"
"ಹೋಗ್ತೀಯಾ ಇನ್ನು?"
"ಖಂಡಿತಾ ಹೋಗೋಲ್ಲ....ಮಗುವಿನಾಣೆ...."
ಅಲ್ಲೆ ಹಿತ್ತಿಲ ಹೋಡೆಗೊರಗಿ ನಿಂತಿದ್ದ ಜಯರಾಮು ತಂಗಿ ಬರುತ್ತಿದ್ದುದನ್ನು
ನೋಡಿದ. ಆಕೆಯೂ ಅಣ್ಣನನ್ನು ಕಂಡು ಅವನ ಬಳಿಗೆ ಬಂದಳು. ಇಬ್ಬರೂ
ಕತ್ತಲೆಯಲ್ಲಿ ನಿಂತು, ಕಿಟಕಿಯ ಮೂಲಕ ಸ್ವಲ್ಪಸ್ವಲ್ಪವಾಗಿ ಕಾಣುತ್ತಿದ್ದ ದ್ರಶ್ಯವನ್ನು
ನೋಡಿದರು; ಕೇಳಿಸುತ್ತಿದ್ದ ಎಲ್ಲ ಮಾತುಗಳಿಗೂ ಕಿವಿಗೊಟ್ಟರು.
ಮಗುವಿನಾಣೆ....!
ಮೂವರು ಮಕ್ಕಳು ಹೆದರಿ ಗಡಗಡನೆ ನಡುಗುತ್ತ ಅಡುಗೆ ಮನೆ ಸೇರಿದ್ದರು.
ಹೊರಗೆ ನಿಂತಿದ್ದವರಿಗೆ, ಅಸಹಾಯಳಾಗಿ ನೆಲದ ಮೇಲೆ ಬಿದ್ದಿದ್ದ ಹೆಂಗಸು ಕಾಣು
ತ್ತಿರಲ್ಲಿಲ್ಲ. ಖಾಕಿಯ ಪೋಷಕು ಧರಿಸಿದ್ದ ಗಂಡಸು ಮಾತ್ರ ಅತ್ತಿತ್ತ ಚಲಿಸುವುದು
ಕಾಣಿಸುತ್ತಿತ್ತು.
ಇದರ ಹಿನ್ನಲೆ ಅಣ್ಣನಿಗೆ ತಿಳಿಯಲೆಂದು ತಂಗಿ ಹೇಳಿದಳು: