ಪುಟ:Rangammana Vathara.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

124

ಸೇತುವೆ

ಬಳಿಕ, ನಿಜ ಸಂಗತಿ ರಂಗಮ್ಮನಿಗೆ ಗೋತ್ತಾಗಿತ್ತು. ರಂಗಮ್ಮ ರೇಗುತ್ತಿದ್ದಾಗಲೂ
ತಮಾಷೆಯಾಗಿಯೇ ಇರಲು ಅತ ಯತ್ನಿಸುತ್ತಿದ್ದ.
ವಠಾರದಲ್ಲಿ ಉಂಟಾದ ಪ್ರಕ್ಷುಬ್ದ ಪರಿಸ್ಥಿತಿ ಶಾಂತವಾಗಿ ಎಷ್ಟೋ ದಿನಗಳಾದ
ಮೇಲೆ, ಪಕ್ಕದಮನೆಯಾತ ಒಳ್ಳೆಯವನು ಎಂದು ಜಯರಾಮಮುವಿನ ತಾಯಿ ಪ್ರಮಾಣ
ಪತ್ರ ಕೊಟ್ಟ ಮೇಲೆ, ರಂಗಮ್ಮ ಒಂದು ದಿನ ಹೇಳಿದ್ದರು:
"ಚಂದ್ರಶೇಖರಯ್ಯ, ನೀವು ಇಷ್ಟೆಲ್ಲಾ ಓದಿದೋರು,ಬುದ್ದಿವಂತ. ಕೈತುಂಬಾ
ಸಂಪಾದನೆ ಇದೆ. ಹೀಗಿದ್ದೂ ಈ ತರಹೆ ಇದೀರಲ್ಲಾ..."
ವಿಷಯವೇನೆಂದು ಊಹಿಸಿ, ಅವನ ಮುಖ ನಸುಗೆಂಪಾಯಿತು.
"ಯಾವ ಥರ ಇದೀನಿ ರಂಗಮ್ನೋರೆ?"
"ಎಷ್ಟು ದೀನಾಂತ ಈ ಕೆಟ್ಟ ಹೋಟ್ಲುಟ ಮಾಡ್ತೀರಪ್ಪಾ?"
ಹೋಟೆಲು ಊಟ ಚೆನ್ನಾಗಿರುತ್ತರೆಂದು ಹೇಳಿದ ಒಬ್ಬ ಮನುಷ್ಯ ಪ್ರಾಣಿ
ಯನ್ನು ಚಂದ್ರಶೇಖರಯ್ಯ ಆವರೆಗೆ ನೋಡಿರಲಿಲ್ಲ.
"ಏನಾಗಿದೆ ರಂಗಮ್ನೋರೆ?"
"ನಿಮ್ಮ ಅವಸ್ಥೆನೋ ನೀವೋ...ದೇವರಿಗೇ ಪ್ರೀತಿ."
ಚಂದ್ರಶೇಖರಯ್ಯ ನಕ್ಕು ಕೇಳಿದ:
"ನಾನು ಏನ್ಮಾಡಿದ್ರೆ ನಿಮಗಿಷ್ಟವಾಗುತ್ತೆ ಹೇಳಿ?"
"ಬಾಯಿಬುಟ್ಟು ಹೇಳ್ಬೇಕೇನಪ್ಪಾ ಅದನ್ನೂ? ಇನ್ನೂ ಹೀಗೇ ಇರ್ಬೇಡಿ...
ನೀವೇನು ಚಿಕ್ಕ ಹುಡುಗ್ನೆ ಈಗ? ಬೇಗ್ನೆ ಒಳ್ಳೆ ಹೆಣ್ಣು ನೋಡಿ ಮದುವೆ ಮಾಡಿ
ಕೊಳ್ಳಿ, ನಿಮ್ಮ ತಂದೆ ತಾಯಿ ಅದು ಹ್ಯಾಗೆ ಸಹಿಸಿಕೊಂಡಿದಾರೊ?"
ಅವರು ಸಹಿಸಿಕೊಂಡಿರಲಿಲ್ಲ. ಹಿರಿಯ ಮಗನಾದ ಚಂದ್ರಶೇಖರಯ್ಯ ಮನೆಗೆ
ಬಂದಾಗಲೆಲ್ಲ ಅವನನ್ನು ಅವರು ಗೋಳು ಹುಯ್ಯುತ್ತಿದ್ದರು. ಆಳು ಕಾಳು ಇಟ್ಟು
ಕೊಂಡು ಮನೆತನದ ಅಲ್ಪ ಆಸ್ತಿಯ ಉಸ್ತುವಾರಿ ಮಾಡುತ್ತಿದ್ದ ಆತನ ತಮ್ಮನಿಗೂ
ಅಣ್ಣನನ್ನು ಕಂಡರಾಗುತ್ತಿರಲಿಲ್ಲ. ಆ ತಮ್ಮನಿಗೆ ಆಗಲೆ ಮದುವೆಯಾಗಲು ಮನ
ಸ್ಸಿತ್ತು. ಹಿರಿಯರು ಸೋದರರಿಬ್ಬರಿಗೂ ಹುಡುಗಿಯರನ್ನು ನೋಡಿ ಇಟ್ಟಿದ್ದರು.
ಆದರೆ ಅಣ್ಣ ಅವಿವಾಹಿತನಾಗಿ ಇರುವಷ್ಟು ಕಾಲ ತಮ್ಮ ಸುಮ್ಮನಿರಬೇಕಾಗಿತ್ತು.
ಚಂದ್ರಶೇಖರಯ್ಯನೇನೋ ಹೇಳಿದ್ದ:
"ಅವನಿಗೆ ಮದುವೆ ಮಾಡಿಸ್ಬಿಡಿ. ಕಾಗದ ಬರೀರಿ. ಬಂದು ಹೋಗ್ತೀನಿ."
"ನಿನಗೆ?"
"ನನಗೆ ಈಗ್ಬೇಡ...."
.... ಕಿರ್ ಕಿರ್ರೆನ್ನುತ್ತಿದ್ದ ಕಬ್ಬಿಣದ ಮಂಚದ ಮೇಲೆ ಅತ್ತಿತ್ತ ಹೊರಳುತ್ತ
ಚಂದ್ರಶೇಖರಯ್ಯ ಕಿಟಕಿಯ ಮೂಲಕ ಹೊರಗೆ ನೋಡಿದ. ಒಂದು ಚೂರು ಅಕಾಶ
ಕಾಣಿಸುತ್ತಿತ್ತು. ಅಲ್ಲಿ ಹಲವು ನಕ್ಷತ್ರಗಳು ಮಿನುಗುತ್ತಿದ್ದವು.