ಪುಟ:Rangammana Vathara.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

129

ಹೋದಾಗ ಬರಲಿದ್ದ ಮಳೆಯ ನೆನಪು ರಂಗಮ್ಮನಿಗೆ ಆಗಿತ್ತು. ಆದರೆ ಅವರು ಬೀಗದ
ಕೈ ಕೇಳಿರಲಿಲ್ಲ. ಬಾಡಿಗೆ ಸಂದಾಯವಾದ ಮನೆಯ ಬೀಗದ ಕೈ ಕೇಳುವುದೆಂದರೇನು?
ಅಥವಾ ಕೇಳಿ ಇಸಕೊಂಡಿದ್ದರೂ ಎಷ್ಟು ಜನರಿಗೆ ಆ ಜಾಗವನ್ನು ಕೊಟ್ಟು ತೃಪ್ತಿ
ಪಡಿಸುವದು ಸಾಧ್ಯವಿತ್ತು?
ರಂಗಮ್ಮ ಹಲವಾರು ರಟ್ಟುಗಳ ಚೂರುಗಳನ್ನು ಸಂಗ್ರಹಿಸಿ ಇಟ್ಟಿದ್ದರು, ಮಗನ
ನೆರವಿನಿಂದ. ಪ್ರತಿಯೊಂದು ಮನೆಗೂ ನಾಲ್ಕುನಾಲ್ಕನ್ನು ಹಂಚಲು ಅವರು
ಮುಂದಾದರು.
"ಗುಂಡಣ್ಣಾ, ಒಳಗೇ ನಿಂತ್ಕೊಂಡು ಸೋರೋ ಹೆಂಚು ಯಾವುದೂಂತ
ನೋಡಿ ಇದನ್ನೆಲ್ಲಾ ಇಡ್ತೀಯೇನಪ್ಪಾ?"
ಪರೋಪಕಾರಿಯಾದ ಗುಂಡಣ್ಣ, ರಂಗಮ್ಮನ ಅಪೇಕ್ಷೆಯಂತೆ ಸಿದ್ಧನಾದ.
ಆದರೆ ಆತನಿಗೆ, ಛಾವಣಿಯ ಮೇಲಕ್ಕೆ ಹೋಗಿ ಸರಿಪಡಿಸೆಂದು ರಂಗಮ್ಮ ಹೇಳಲಿಲ್ಲ.
ಬೇರೆ ಯಾರೂ ಸೂಚಿಸಲಿಲ್ಲ.
"ಮೊದಲ್ನೇ ದಿವಸದ ಮಳೆಗೆ ಮಾತ್ರ ಹೀಗಾಗುತ್ತೆ" ಎಂದು ಬೇರೆ, ರಂಗಮ್ಮ
ಚಂಪಾವತಿಯ ಎದುರು ಅಂದರು. ವಠಾರದ ಹಳಬರಿಗೆ ಆ ವಿಷಯದ ನಿಜರೂಪ
ತಿಳಿದಿತ್ತು. ರಂಗಮ್ಮ ಹೇಳಿದೊಡನೆ ನಂಬುವ ಮುಗ್ಧೆಯೂ ಚಂಪಾವತಿಯಾಗಿ
ರಲಿಲ್ಲ.
ಅನಂತರ ಪ್ರತಿ ಸಂಚೆಯೂ ಮಳೆ ಸುರಿಯಿತು. ಸಂಚೆ ಬಂದ ಮಳೆ ರಾತ್ರಿ
ಬಹಳ ಹೋತ್ತಿನ ತನಕವೂ ಇರುತ್ತಿತ್ತು. ಸೋರುವುದು ತಪ್ಪಲಿಲ್ಲ.
ನಗರದಲ್ಲಿ ಬೆಚ್ಚಗಿನ ಮನೆಗಳಿದ್ದವರು ಗೊಣಗುತ್ತಿದ್ದರು.
"ಹಗಲು ಯಾಕೆ ಬರುತ್ತೋ ಈ ಮಳೆ. ಸಾಯಂಕಾಲವಂತೂ ಪಿಕ್ಚರಿಗೆ,
ವಾಕಿಂಗಿಗೆ ಯಾವುದಕ್ಕೂ ಹೋಗೋ ಹಾಗಿಲ್ಲ. ನಾವೆಲ್ಲ ನಿದ್ದೆ ಹೋದ ಮೇಲೆ
ರಾತ್ರೆ ಈ ಮಳೆ ಬರಬಾರ್ದೆ?"
ಆದರೆ ರಂಗಮ್ಮನ ವಠಾರದವರು ಹೇಳುತ್ತಿದ್ದುದೇ ಬೇರೆ:
"ಈ ಮಳೆ ಹಗಲಾದರೂ ಬಂದು ಹೋಗಲಪ್ಪಾ. ರಾತ್ರೆ ಬರದೇ ಇರ್ಲಿ.
ಮಕ್ಕಳು ಮರಿ ರಾತ್ರೆ ಹೋತ್ತು ಬೆಚ್ಚಗಿದ್ದು ನಿದ್ದೇನಾದರೂ ಮಾಡುವಂತಾಗಲಪ್ಪಾ."
ಆದರೆ ಮಳೆ ಇವರು ಯಾರ ಅಪೇಕ್ಷೆಯನ್ನೂ ಪರಿಶೀಲಿಸಿದಂತೆ ತೋರಲಿಲ್ಲ.
ಅದು ತನಗಿಷ್ಟ ಬಂದಂತೆ ಸುರಿಯುತ್ತಿತ್ತು.
ಮಳೆಯ ಕಾಟದೊಡನೆ, ವಠಾರಕ್ಕೆ ಕಂಬಳಿ ಹುಳಗಳ ಪ್ರವೇಶವಾಯಿತು.
ಹೆಂಚಿನ ಎಡೆಗಳಲ್ಲೂ ಗೋಡೆಯ ಮೂಲೆಗಳಲ್ಲೂ ಅವು ಮನೆ ಮಾಡಿದುವು. ಜೊರೋ
ಎಂದು ಮಳೆ ಸುರಿಯುತ್ತಿದ್ದರೆ ಟಪ್ಪ ಟಪ್ಪ ಎಂದು ಕಂಬಳಿ ಹುಳಗಳು ಕೆಳಕ್ಕೆ ಉರುಳು
ತ್ತಿದ್ದುವು.

17