ಪುಟ:Rangammana Vathara.pdf/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

140

ಸೇತುವೆ

ಆದರೆ ಆ ಡಾಕ್ಟರ ಜಾತಿ ಬೇರೆ. ಅದಲ್ಲದೆ ಅದು ನೂರಿನ್ನೂರು ರೂಪಾಯಿ ವೆಚ್ಚದ
ಬಾಬು. ಆ ವಿಷಯವನ್ನು ಗಂಡನ ಕಿವಿ ಮೇಲೆ ಹಾಕಿ ಕಮಲಮ್ಮ ಸುಮ್ಮನಾಗಿದ್ದಳು.
ಆತ ಗದರಿ ನುಡಿದಿದ್ದ:
"ಮಾರವಾಡಿ ಕಾಲು ಹಿಡಿದು ಸಾಲ ತರಬೇಕು ಅಂತೀಯೇನು?ಲೇಡಿ
ಡಾಕ್ಟರು!..."
"ನಾನೆಲ್ಲಿ ಹಾಗಂದೆ? ಸುಮ್ನೆ ಹೇಳ್ದೆ ಅಷ್ಟೆ."
ಡಾಕ್ಟರು ಯಾವ ಜನವಾದರೇನು? ಮನುಷ್ಯರು ತಾನೇ? ತಾನು ಬರಿಗೈ ಬಡವ
ಎಂದು ಹೇಳಿಕೊಂಡರೆ ರೋಗ ಪರೀಕ್ಷೆಗೇನೂ ಖರ್ಚಾಗಲಾರದು-ಎಂದು ಆತ
ಯೋಚಿಸಿದ. ಆದರೆ ಪರೀಕ್ಷೆಯಾದ ಮೇಲೆ ಔಷಧಿ ತರಬೇಕು. ಅದಕ್ಕೆ ಬೇಕು
ದುಡ್ಡು. ಎಷ್ಟು ರೂಪಾಯಿಯೋ ಏನೋ. ಆ ಚಿಂತೆ ಆತನನ್ನು ಕಾಡಿತು.
"ಮನುಷ್ಯನ ಕೈಲಿ ಏನಿದೆ? ಎಲ್ಲಾ ಆ ಭಗವಂತನ ಇಚ್ಛೆ. ಆ ಮಹಾರಾಯ
ಅದೇನು ಬರೆದಿದ್ದಾನೋ?" ಎಂದು ಆತ ಹೆಂಡತಿಗೆ ಹೇಳಿದ.
ಆದರೆ, ಹೊರಗೆ ಹಾಗೆ ಹೇಳಿದರೂ ಮನಸ್ಸಿನೊಳಗೆ ಆಸೆ ಇದ್ದೇ ಇತ್ತು.
'ಅನುಕೂಲವಾದಾಗ ಒಮ್ಮೆ ಪರೀಕ್ಷೆ ಮಾಡಿಸಬೇಕು' ಎಂದು ತೀರ್ಮಾನಿಸಿದ್ದ. ಆದರೆ
ಇಷ್ಟು ವರ್ಷಗಳಾದರೂ ಅನುಕೂಲವಾಗಿಯೇ ಇರಲಿಲ್ಲ.
ಒಂಟಿಯಾಗಿಯೇ ಅಸಂಖ್ಯ ರಾತ್ರೆಗಳನ್ನು ಕಳೆದು ಅಭ್ಯಾಸವಾಗಿದ್ದ
ಕಮಲಮ್ಮ....
....ಈ ರಾತ್ರೆ ಆಕೆ ಒಂಟಿಯಾಗಿರಲಿಲ್ಲ. ಗಂಡ ಬಂದಿದ್ದ.
ಗಂಡ ಬಂದೊಡನೆ ಸರಸ ಸಲ್ಲಾಪಗಳಾದುವೆಂದು ಅರ್ಥವಲ್ಲ. ಅಂತಹ
ಅಭ್ಯಾಸವನ್ನು ಆ ವಕ್ರಾಚಾರ್ಯ ಇಟ್ಟಿರಲಿಲ್ಲ. ದಾಂಪತ್ಯ ಜೀವನದ ಮೊದಲ ವರ್ಷಗಳ
ಸುಖವೀಗ ಗತಕಾಲದ ನೆನಪು ಮಾತ್ರ. ಆದರೆ ಆ ನೆನಪು ಕೂಡ ಒಂದು ಶತಮಾನದ
ಹಿಂದಿನ ಕತೆಯೇನೋ ಎನ್ನುವ ಹಾಗೆ ಮಾಸಿಹೋಗಿತ್ತು.
ಗಂಡ ಊರಿಗೆ ಬಂದಾಗ ಕಮಲಮ್ಮ ಆತನ ಜತೆಯಲ್ಲಿ ಮಲಗುತ್ತಿದ್ದಳು.
ಆದರೆ, ಗಂಡನ ರೋಮ ತುಂಬಿದ ವಕ್ಷಸ್ಥಲದ ಮೇಲೆ ಮುಖವಿಟ್ಟು ಅಳಬೇಕೆಂದು
ಆಕೆಗೆ ತೋರುತ್ತಿರಲಿಲ್ಲ. ಹೃದಯದ ದುಗುಡವನ್ನು ಬಿಚ್ಚಿಟ್ಟು ಹೆಂಡತಿಯೊಡನೆ
ಮಾತನಾಡಬೇಕೆಂದು ಆತನಿಗೂ ಅನಿಸುತ್ತಿರಲಿಲ್ಲ.
ಮಲಗಿದೊಡನೆ ಏನೋ ನೆನಪಾಗಿ ಈ ಸಲ ಆತ ಕೇಳಿದ:
"ಈ ತಿಂಗಳ ಬಾಡಿಗೆ ಕೊಟ್ಟೆಯೇನು?"
"ಹೂಂ."
"ಇಲ್ಲಿ ಮಳೆ ಚೆನ್ನಾಗಿ ಬಿತ್ತೆ?"
"ಹೌದು."

"ರಂಗಮ್ಮ ಈ ವರ್ಷವೂ ಭಾವಣಿ ದುರಸ್ತಿ ಮಾಡಿಸ್ಲಿಲ್ಲ."