ಪುಟ:Rangammana Vathara.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

142

ಸೇತುವೆ

ಐದು ನಿಮಿಷಗಳಾಗುವವರೆಗೂ ಅವರು ಕಾಯುತ್ತಿದ್ದರು.
ಒಂದು ದಿನ ಅಂಚೆಯವನು ಗೇಟಿನ ಹೊರಗೆ ನಿಂತು, ಒಂದು ಲಕೋಟೆ
ಯನ್ನು ಕೈಯಲ್ಲೆತ್ತಿ ಹಿಡಿದ. ಹಲವು ಮುಖಗಳು ಸ್ವಾಗತ ಬಯಸಿದುವು.
ಅಂಚೆಯವನು ಕೇಳಿದ:
"ಇಲ್ಲಿ ರಾಜಶೇಖರ ಅಂತ ಯಾರಿದಾರೆ? ಪಿ.ವೈ.ರಾಜಶೇಖರ."
"ಯಾರೂ ಇಲ್ವಲ್ಲಾ!" ಎಂದರು ಒಬ್ಬಿಬ್ಬರು ಹೆಂಗಸರು.
"ಮಹಡಿ ಮೇಲಿರೋರೋ ಏನೋ," ಎಂದಳು ಇನ್ನೊಬ್ಬಳು.
"ಅವರು ಚಂದ್ರಶೇಖರಯ್ಯ ಕಣೇ," ಎಂದು ಮತ್ತೊಬ್ಬಳು ಸಂದೇಹ ಪರಿಹರಿ
ಸಿದ್ದೂ ಆಯಿತು.
"ಅವರಲ್ಲ, ಅವರಲ್ಲ," ಎಂದು ಅಂಚೆಯವನೂ ಧ್ವನಿಗೂಡಿಸಿದ.
ಮೇಲೆ ಪರೀಕ್ಷೆಗೆ ಓದ್ದುತ್ತ ಕುಳಿತಿದ್ದ ಜಯರಾಮು ಅಂಚೆಯವನನ್ನು ನೋಡಿ
ಕೆಳಕ್ಕೆ ಇಳಿದು ಬಂದ. ಅಂಚೆಯವನು ಮತ್ತೊಮ್ಮೆ ತನ್ನ ಪ್ರಶ್ನೆಯನ್ನು ಕೇಳಿ
ದ್ದಾಯಿತು.
ಆ ಕಾಗದ, ಹೊಸತಾಗಿ ಬಂದ ವಿದ್ಯಾರ್ಥಿಗಳದಿರಬಹುದೆಂದು ಜಯರಾಮು
ವಿಗೆ ಹೊಳೆಯಿತು. ಹೊರಗೆ ಬರುತ್ತಿದ್ದ ರಂಗಮ್ಮನನ್ನು ಉದ್ದೇಶಿಸಿ ಆತ ಕೇಳಿದ:
"ಹೊಸದಾಗಿ ಬಂದಿರೋರಲ್ಲಿ ರಾಜಶೇಖರ ಅಂತ ಒಬ್ರಿದಾರೆ. ಅಲ್ವೆ
ರಂಗಮ್ನೋರೆ?"
"ಅದೇ ಆ ಓದೋ ಹುಡುಗರ ಪೈಕಿ?"
"ಹೂಂ. ಹೌದು."
"ಇದಾನೆ__ಇದಾನೆ."
ಅಂಚೆಯವನು ಕಾಗದವನ್ನು ಜಯರಾಮುವಿಗೆ ಕೈಗೆ ಕೊಟ್ಟು ಹೊರಟು
ಹೋದ.
ತನಗೆ ಕಾಗದ ಬರೆಯುವಂತಹ ನೆಂಟರಿಷ್ಟರು ಯಾರೂ ಇಲ್ಲದೆ ಇದ್ದ ರಾಜಮ್ಮ
ಕೇಳಿದಳು:
"ಯಾವೂರಿಂದ ಬಂದಿದೆ?"
ಜಯರಾಮು ಮಾತನಾಡಲಿಲ್ಲ. ಆ ಹೆಂಗಸರನ್ನೆಲ್ಲ ಆತ ದುರದುರನೆ ನೋಡಿ,
ಕಾಗದದೊಡನೆ ಮಹಡಿಯ ಮೆಟ್ಟಲುಗಳನ್ನೇರಿದ.
ಲಕೋಟೆಯ ಮೇಲೆ ವಿಳಾಸ ಬರೆದಿತ್ತು:
ಪಿ.ವೈ.ರಾಜಶೇಖರನಿಗೆ, ರಂಗಮ್ಮನ ವಠಾರ, ಶ್ರೀರಾಮಪುರ, ಬೆಂಗಳೂರು
ಸಿಟಿ. ಸಿಟಿಯ ಮುಂದೆ ಕತ್ತರಿ ಗುರುತು ಹಾಕಿ ನಾಲ್ಕು ಚುಕ್ಕೆ ಇಟ್ಟಿದ್ದರು. ಅದರ
ಕೆಳಗೆ ಕೆಂಪು ಮಸಿಯಲ್ಲಿ ಬೆಂಗಳೂರು ಎಂದು ಇಂಗ್ಲಿಷಿನಲ್ಲಿತ್ತು. ಅದನ್ನು ಆಂಚೆ

ಯವರು ಬರೆದಿರಬೇಕು ಎಂದು ಜಯರಾಮು ಊಹಿಸಿಕೊಂಡ.