ಪುಟ:Rangammana Vathara.pdf/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

143

ಅವನ ಕಲ್ಪನೆ ಆ ವಿವಿಧ ಪದಗಳ ಸುತ್ತಲೂ ಸ್ವಲ್ಪ ಹೊತ್ತು ಸುಳಿದಾಡಿತು.
ಅದು ಹುಡುಗು ಕೈ ಬರಹ. ದುಂಡಗಿತ್ತು. ರಾಜಶೇಖರನ ತಮ್ಮ ಬರೆದಿದ್ದನೇನೊ?
ಅಥವಾ ತಂಗಿ?..... ಆ ಮೂವರಲ್ಲಿ ಯಾವನು ರಾಜಶೇಖರ? ಆ ಕಾಗದದಲ್ಲಿ ಏನಿ
ದೆಯೊ? ತನ್ನ ತಂದೆ ತನಗೆ ಬರೆಯುವಂತೆ ಅವನ ತಂದೆ ಆತನಿಗೆ ಬರೆದಿರಬಹುದಲ್ಲವೆ?
ಕಾಗದದ ಒಕ್ಕಣೆಯನ್ನು ಊಹಿಸಿಕೊಳ್ಳುವುದು ಜಯರಾಮುವಿಗೆ ಕಷ್ಟ
ವಾಗಿರಲಿಲ್ಲ:
'ಕುಶಲ' ಎಂದಿರಬಹುದು ಮೇಲ್ಗಡೆ. ಇಲ್ಲವೆ, ಕಾಗದದ ಮೂಲೆಯಲ್ಲಿ 'ಕ್ಷೇಮ'
ಎಂದು ಬರೆದು ಕೆಳಗೆ ಎರಡು ಗೆರೆ ಎಳೆದಿರಬಹುದು.....ಚಿ||ಗೆ ಮಾಡುವ
ಆಶೀರ್ವಾದ....ನಾವು ಇಲ್ಲಿ ಎಲ್ಲರೂ ಕ್ಷೇಮ....ನಿನ್ನ ಕ್ಷೇಮದ ಬಗ್ಗೆ ಬರೆಯುತ್ತಿರು.....
ಹಾಗೆ ಕಾಗದ ಬರೆದ ತಂದೆ....ರಾಜಶೇಖರನ ತಂದೆಯನ್ನು ಚಿತ್ರಿಸಿಕೊಳ್ಳಲು
ಜಯರಾಮು ಯತ್ನಿಸಿದ. ಆ ಆಕೃತಿ ಅಷ್ಟು ಸ್ಪಷ್ಟವಾಗಿ ಮೂಡಲಿಲ್ಲ. ತನ್ನ
ಯೋಚನೆಗಳನ್ನು ಕಂಡು ಆತನಿಗೆ ನಗು ಬಂತು.
ರಾಧಾ ಬಾಗಿಲಿನಿಂದ ಹೊರಕ್ಕೆ ಇಣಕಿ ನೋಡಿ ಕೇಳಿದಳು:
"ಯಾರದಣ್ಣ ಕಾಗದ?"
"ನಮಗಲ್ವೆ," ಎಂದ ಜಯರಾಮು, ತನ್ನ ಯೋಚನೆಗಳನ್ನು ನಿಲ್ಲಿಸಿ. ಆ ಸ್ವರ
ದಲ್ಲಿ ಸಿಡುಕಿತ್ತು. ವಠಾರದ ಇತರ ಹೆಂಗಸರು ಹಾಗೆ ತನ್ನ ತಂಗಿಯೂ ಅತಿ ಕುತೂಹಲಿ
ಯಾಗುವುದು ಆತನಿಗೆ ಇಷ್ಟವಿರಲಿಲ್ಲ.
ಜಯರಾಮು ಮೊದಲ ಕೊಠಡಿಯ ಬಾಗಿಲು ಸಂದಿಯೊಳಗಿಂದ ಲಕೋಟೆ
ಯನ್ನು ಒಳಕ್ಕೆ ತಳ್ಳಿದ.
ತರಗತಿ ಮುಗಿದೊಡನೆ ಎಂದಿನಂತೆ ಬಂದವನು ಆ ಹುಡುಗನೇ. ಕಾಲಲ್ಲಿ
ಚಪ್ಪಲಿ ಇಲ್ಲದೆ, ಆತ ಮೆಟ್ಟಲೇರಿದರೆ ಸದ್ದಾಗುತ್ತಿರಲಿಲ್ಲ. ಬಾಗಿಲ ಬೀಗವನ್ನೂ
ಸಾವಧಾನವಾಗಿ ತೆಗೆಯುತ್ತಿದ್ದ.
ಕಿಟಕಿಯ ಬಳಿ ಕುಳಿತಿದ್ದ ಜಯರಾಮುಗೆ, ಆ ಹುಡುಗ ಬಂದುದು ತಿಳಿಯಿತು.
ಆತನೇ ರಾಜಶೇಖರನಿರಬಹುದು; ಕಾಗದ ತೆರೆದು ಓದುತ್ತಿರಬಹುದು ಎಂದು ಜಯ
ರಾಮು ಕಲ್ಪಿಸಿಕೊಂಡ. ಸ್ವಲ್ಪ ಹೊತ್ತದ ಮೇಲೆ ಎದ್ದು, ಆ ಹುಡುಗನನ್ನು ಮಾತ
ನಾಡಿಸೋಣವೆಂದು ಆ ಕೊಠಡಿಯತ್ತ ಸಾಗಿದ.
ಚಾಪೆಯ ಮೇಲೆ ಕುಳಿತುಕೊಂಡು ತಲೆಬಾಗಿಸಿ ಎರಡನೆಯ ಸಾರೆ ಕಾಗದ ಓದು
ತ್ತಿದ್ದ ಹುಡುಗ ಮುಖವೆತ್ತಿ ಬಾಗಿಲಿನತ್ತ ದಿಟ್ಟಿಸಿದ. ತಾನು ಎಷ್ಟೋ ದಿನಗಳಿಂದ
ನೋಡುತ್ತಲಿದ್ದ ವಠಾರದವನು ಅಲ್ಲಿ ನಿಂತಿದುದನ್ನು ಕಂಡು ಆ ಹುಡುಗನಿಗೆ ಸಂಕೋ
ಚವೂ ಆಯಿತು, ಸಂತೋಷವೂ ಆಯಿತು. ಎದ್ದು ನಿಂತು ಆತ ಹೇಳಿದ:
"ಒಳಗ್ಬನ್ನಿ."
"ಪರವಾಗಿಲ್ಲ....ಅಂಚೆಯವನು ಒಂದು ಕಾಗದ ತಂದ್ಕೊಟ್ಟ. ಒಳಗೆ ಹಾಕ್ದೆ.