ಪುಟ:Rangammana Vathara.pdf/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

146

ಸೇತುವೆ

ಅವರಲ್ಲೊಬ್ಬ-ದೇವಯ್ಯ-ಒಂದು ತಿಂಗಳೊಳಗೆ ಕಾಲೇಜಿನ ಸೊಗಸುಗಾರನಾದ.
"ಇದು ಸುಡುಗಾಡು ರೂಮು. ಮುಂದಿನ ಟರ್ಮಿನ ಹೊತ್ತಿಗೆ ಕಾಲೇಜು
ಹಾಸ್ಟೇಲಿಗೇ ಸೇರ್ಕೊಂತೀನಿ." ಎಂದು ಆತ ಪದೇ ಪದೇ ಹೇಳುವುದಿತ್ತು. ಆತನ
ತಾಯಿ ತಂದೆ ರಾಜಶೇಖರನಲ್ಲಿ ವಿಶ್ವಾಸವಿಟ್ಟಿದ್ದರು. ಅವನ ಸಹವಾಸದಲ್ಲಿ ತಮ್ಮ
ಹುಡುಗ ಕೆಡಲಾರನೆಂಬುದು ಅವರು ಇಟ್ಟುಕೊಂಡಿದ್ದ ಆಸೆ. ಆದರೆ ಸ್ವತಃ ಸದ್ಗುಣಿ
ಯಾದರೂ ಮತ್ತೊಬ್ಬರ ಮೇಲೆ ಪ್ರಭಾವ ಬೀರುವಂತಹ ವ್ಯಕ್ತಿತ್ವ ರಾಜಶೇಖರನಿಗೆ
ಇರಲಿಲ್ಲ.
ಆ ಹುಡುಗ ದಿನ ಬಿಟ್ಟು ದಿನ, ಒಮ್ಮೊಮ್ಮೆ ದಿನವೂ, ಸಿನಿಮಾ ನೋಡುತ್ತಿದ್ದ.

ರಾಜಶೇಖರ ಹೇಳುವುದಿತ್ತು:
"ಕಣ್ಣಿಗೆ ಕೆಟ್ದು ಕಣಪ್ಪ. ಎಷ್ಟೂಂತ ನೋಡ್ತೀಯಾ?"
"ಓಗ್ಲಿ ಬಿಡು. ಕಣ್ಣಿಗೆ ಕನ್ನಡಕ ಆಕಿಸ್ಕೊಂಡ್ರಾಯ್ತು."
ಮೊದಮೊದಲು ದೇವಯ್ಯ ರಾಜಶೇಖರನಿಗೆ ತಿಳಿಯದಂತೆ ಹೊರಗೆ ಸಿಗರೇಟು
ಸೇದುತ್ತಿದ್ದ, ಕ್ರಮೇಣ ಅವನೆದುರೇ ಸೇದಿದ. ಆಗಲೂ ರಾಜಶೇಖರ ಒಳ್ಳೆಯ
ಮಾತು ಹೇಳಲು ಪ್ರಯತ್ನಿಸಿದ್ದುಂಟು.
"ಯಾಕಪ್ಪ ಸಿಗರೇಟು ಸೇದ್ತೀಯಾ? ಕ್ಷಯರೋಗ ಬತ್ತದೆ ನೋಡು!"
"ಸಾಕು ಬಿಡೋ. ಊರ ಹೊರ್ಗೆ ಸಾಂಟೋರಿಯಂನೋಡಿದ್ಯೊ ಇಲ್ವೊ?"
ಒಂದು ದಿನ ಕೊಠಡಿಯಲ್ಲೇ ಆತ ಸೆಗರೇಟು ಹಚ್ಚಿದಾಗ ರಾಜಶೇಖರನಿಗೆ
ರೇಗಿತು.
"ಬೇಡಪ್ಪೋ. ಆರ್ಸು. ಆರ್ಸು."
"ಯಾಕೆ? ಬೆಂಕಿ ಅತ್ಕೊಂತದಾ ಮನೆಗೆ?"
"ಲೇ, ಆರ್ಸೋ. ಆಯಮ್ಮಂಗೆ ಗೊತ್ತಾದ್ರೆ ನಮ್ನೆಲ್ಲಾ ಓಡಿಸ್ತಾರೆ."
"ಅದು ಹೆಂಗೆ ಓಡಿಸ್ತಾರೆ? ಬಿಟ್ಟೀ ಕುಂತಿದೀವಾ ಇಲ್ಲಿ? ಬಾಡಿಗೆ ಕೊಡ
ಲ್ವೇನು?"
"ಬ್ರಾಂಬರ ಮನೆ ಕಣಪ್ಪಾ...."
ರಾಜಶೇಖರ ಆ ಬಾಣವೆಸೆದ, ಅದಾದರೂ ತಾಗಬಹುದೆಂದು.
"ನೋಡಿದೀನಿ ಬಿಡು. ಪಕ್ಕದ್ಮನೆಯೋರು ಸೇದಲ್ವಾ?"
ದೇವಯ್ಯನೊಡನೆ ಎದುರು ವಾದಿಸಿ ಗೆಲ್ಲುವುದು ಸಾಧ್ಯವಿರಲಿಲ್ಲ.
ಆತ ಪಾಠಗಳಿಗೆ ಗಮನ ಕೊಡುತ್ತಿರಲಿಲ್ಲ. ತಡವಾಗಿ ಏಳುತ್ತಿದ್ದ.
ರಾಧೆಯನ್ನು ನೋಡಿ ಒಂದೆರಡು ಬಾರಿ ಮುಗುಳ್ನಗುವುದಕ್ಕೂ ದೇವಯ್ಯ
ಯತ್ನಿಸಿದ. ಒಮ್ಮೆ ಹಾಗೆ ಮಾಡಿದಾಗ ರಾಧೆ ಜಯರಾಮುಗೆ ದೂರು ಕೊಟ್ಟಳು.
ಆತಹೊರಬಂದು ಎರಡು ನಿಮಿಷ ಆ ಹುಡುಗನನ್ನೇ ಎವೆಯಿಕ್ಕದೆ ನೋಡಿದ.
ಆದರೆ ಆ ನೋಟದಿಂದೇನೂ ಪರಿಣಾಮವಾಗಲಿಲ್ಲ.