ಪುಟ:Rangammana Vathara.pdf/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

147

ಒಂದು ರಾತ್ರೆ ದೇವಯ್ಯ ಸ್ವಲ್ಪ ತಡವಾಗಿ ಬಂದ. ಸಿಳ್ಳು ಹಾಕುತ್ತಾ ಮೆಟ್ಟ
ಲೇರಿದ. ದೀಪ ಆರಿಸುವ ಹೊತ್ತಾಯಿತೆಂದು ಕೊನೆಯ 'ಗಸ್ತಿ' ಮಾಡುತ್ತ ಹೆಬ್ಬಾ
ಗಿಲಿಗೆ ಬಂದ ರಂಗಮ್ಮನಿಗೆ ಆ ಸಿಳ್ಳು ಕೇಳಿಸಿತು. 'ಓದುವ ಹುಡುಗರ ಪೈಕಿ'ಯೇ
ಇರಬೇಕೆಂದು ರಂಗಮ್ಮನಿಗೆ ಖಚಿತವಾಯಿತು.
ಅವರು ಸ್ವರವೆತ್ತಿ ಕೂಗಾಡಿದರು:
"ಯಾರದು___ಸಿಳ್ಳು ಹಾಕ್ತಿರೋದು?"
ಉತ್ತರ ಬರಲಿಲ್ಲ.
ರಂಗಮ್ಮನ ರೇಗುತ್ತ ಅಂದರು:
"ಇದೇನು ಸಂತೇ ಬೀದಿ ಕೆಟ್ಹೋಯ್ತೆ? ಮಾನ ಮರ್ಯಾದೆ ಒಂದೂ ಬೇಡ್ವೆ
ಯಾರಪ್ಪಾ ಅದು? ಸಿಳ್ಳು ಹಾಕೋವಷ್ಟು ಸೊಕ್ಕು ಬಂದಿರೋದು ಯಾರಿಗಪ್ಪ?"
ಎದುರಿನ ಹಾಗೂ ಮೇಲ್ಗಡೆಯ ಸಂಸಾರಗಳು ಮೌನವಾಗಿ ರಂಗಮ್ಮನ
ಮಾತಿಗೆ ಕಿವಿಗೊಟ್ಟುವು!
ರಾಧಾ ಅಣ್ಣನಿಗೆಂದಳು:

"ಆ ಹುಡುಗ್ನೇ ಇರ್ಬೇಕು"
ಆ ಹುಡುಗ__ಎಂದರೆ ರಾಧೆಯನ್ನು ನೋಡಿ ಮುಗುಳುನಕ್ಕಿದ್ದವನು. ತಂಗಿಯ
ಊಹೆ ಸರಿ ಎಂಬ ವಿಷಯದಲ್ಲಿ ಜಯರಾಮುಗೆ ಸಂದೇಹವಿರಲಿಲ್ಲ.
ದೇವಯ್ಯ ಮಾತನಾಡಲಿಲ್ಲ. ರಾಜಶೇಖರನ ಎದೆ ಡವಡವನೆ ಹೊಡೆದು
ಕೊಂಡಿತು. ಮತ್ತೊಬ್ಬನಿಗೂ ಗಾಬರಿಯಾಯಿತು. ಆದರೆ ಸಿಳ್ಳು ಹಾಕಿದ ಸದ್
ಗೃಹಸ್ಥ ಬೂಟ್ಸು ತೆಗೆದೆಸೆದು, ಅರ್ಥವಾಗದಂತೆ ಏನನ್ನೋ ಗೊಣಗುತ್ತಾ, ಚಾಪೆಯ
ಮೇಲೆ ಉರುಳಿಕೊಂಡ. ಆದಷ್ಟು ಬೇಗನೆ ಈ ವಠಾರ ಬಿಟ್ಟು ಹೋಗಬೇಕೆಂಬ
ಅವನ ಯೋಚನೆ ಬಲವಾಯಿತು. "ಈ ವಠಾರದಲ್ಲಿ ಓದಲು ಅನುಕೂಲವಿಲ್ಲ.
ಹಾಸ್ಟೆಲಿಗೆ ಸೇರ್ಕೊ ಅಂತ ಪ್ರೊಫೆಸರು ಹೇಳಿದ್ದಾರೆ," ಎಂದೆಲ್ಲ ತಂದೆಗೆ ಬರೆಯ
ಬೇಕೆಂದು ನಿರ್ಧರಿಸಿದ.
ಮೂರನೆಯವನು ಚಿಕ್ಕ ಹುಡುಗ. ಮೊದಲ ಬಾರಿ ಬೆಂಗಳೂರಿಗೆ ಬಂದಾಗ
ಸಿಂಹದ ಬೋನಿನ ಬಾಗಿಲ ಬಳಿ ತಂದು ಬಿಟ್ಟು ಹಾಗಾಗಿತ್ತು ಅವನ ಸ್ಥಿತಿ. ಷೋಕಿ
ಹುಡುಗನ ಜತೆಗಾರನಾಗಿ ಅವನ ಬೇಗನೆ ಚಿಗುರಿಕೊಂಡ. ಆದರೆ ಆ ಹುಡುಗ
ಬಡವ. ಆಗಾಗ್ಗೆ ದೇವಯ್ಯ ಆತನನ್ನು ಕರೆಯುತ್ತಿದ್ದ.
"ಏ, ಬಾರೋ, ಪಿಕ್ಚರ್ ನೋಡ್ಕೊಂಬರಾನ."
"ನೀನ್ಹೋಗು: ನಾ ಒಲ್ಲೆ."
"ಅದ್ಯಾಕೆ ಬೆಕ್ಕಿನ್ಮರಿ ಅಂಗೆ ಅಮರ್ಕೊಂತಿಯಾ ರೂಮ್ನಲ್ಲಿ? ಬಾ-ಬಾ.....
ಟಿಕೆಟಿನ ದುಡ್ಡು ನಾ ಕೊಡ್ತೀನಿ."
ಚಿಕ್ಕ ಹುಡುಗ ದೊಡ್ಡವನೊಡನೆ ಸಿನಿಮಾ ನೊಡಲು ಹೋದ. ಆದರೆ ಆತನ