ಪುಟ:Rangammana Vathara.pdf/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

149

"ಆ ದೀಪ ಉರಿಸ್ಬೇಡವೋ ಮಾರಾಯ. ಕಣ್ಣಿಗೆ ಕೆಟ್ದು."
ರಾಜಶೇಖರ ಉತ್ತರ ಕೊಡಲಿಲ್ಲ.
"ನಮಗೆ ನಿದ್ದೆ ಬರದ ಹಾಗೆ ಮಾಡ್ತೀಯಪ್ಪ ನೀನು!"
ದೇವಯ್ಯ ಹೊಸ ಅಸ್ತ್ರ ಪ್ರಯೋಗಿಸಿದ.
ಆದರೆ ಚಿಕ್ಕವನು ಅವನ ಜತೆ ಸೇರಲಿಲ್ಲ.
"ನಂಗೆ ಪರವಾಗಿಲ್ಲ. ದೀಪ ಇದ್ರೂ ನಿದ್ದೆ ಬತ್ತದೆ. ನಮ್ಮನೇಲಿ ದೀಪ ಉರಿ
ಸ್ಕಂಡೆ ಮಲಕ್ಕೋತೀವಿ." ಎಂದ.
"ಬೆಳಕಿಗೆ ರಟ್ಟು ಅಡ್ಡ ಇಡ್ತೀನಿ. ಯಾರಿಗೂ ತೊಂದ್ರೆ ಆಗೋದಿಲ್ಲ ಬಿಡು."
ಆದರೆ ದೇವಯ್ಯ ಮಾತಿನಲ್ಲಿ ಸೋಲಲು ಇಷ್ಟಪಡಲಿಲ್ಲ. ಪುಸ್ತಕಕ್ರಿಮಿ, ಮಹಾ
ಪಂಡಿತ, ಮೆರಿಟ್ ಸ್ಕಾಲರ್_ಎಂದೆಲ್ಲ ರಾಜಶೇಖರನನ್ನು ಲೇವಡಿ ಮಾಡಿದ.
"ಪರೀಕ್ಷೆ ಬರ್ಲಿ. ಆಗ ಗೊತ್ತಾತದೆ,"ಎಂದು ರಾಜಶೇಖರ ಎಚ್ಚರಿಕೆಯ
ಮಾತನ್ನಾಡಿದ.
ಆ ಸ್ವರ ಕೇಳಿ ಚಿಕ್ಕ ಹುಡುಗನಿಗೆ ಭಯವಾಯಿತು. ಆತ ಹೇಳಿದ:
"ನಾನೂ ಓದ್ಕೊಬೇಕು."
ನಿದ್ದೆ ಹೋಗಲು ಸಿದ್ದನಾಗುತ್ತ ದೇವಯ್ಯ ಚಿಕ್ಕವನ ಸ್ವರವನ್ನೂ ಅಣಕಿಸಿದ:
"ಓಹೋಹೋಹೋ... ನಾನೂ ಓದ್ಕೊಬೇಕು. ಭಪ್ಪರೇ ವಿದ್ಯಾಪ್ರವೀಣ!"
ರಾಜಶೇಖರನಿಗೆ ಇದು ಸಹನೆಯಾಗಲಿಲ್ಲ.
"ನೀನು ಹೀಗೆಲ್ಲಾ ಆಡೋದು ನಿಮ್ತಂದೆಗೆ ಗೊತ್ತಾದ್ರೆ ನಿನ್ನ ಚಮ್ಡ ಸುಲೀ
ತಾರೆ ನೋಡ್ಕೊ."
ನಿಜ ಸಂಗತಿಯನ್ನೇ ಹೇಳಿದ್ದ ರಾಜಶೇಖರ. ಆ ಹುಡುಗನ ತಂದೆಯ ಸಿಡುಕು
ಪ್ರವೃತ್ತಿ ಆತನಿಗೆ ಗೊತ್ತೇ ಇತ್ತು. ಆದರೆ ತಂದೆಯ ನೆನಪು ಮಾಡಿ ಕೊಟ್ಟುದು ಆ
ಹುಡುಗನಿಗೆ ರುಚಿಸಲಿಲ್ಲ. ಆತ ಸುಟ್ಟುಬಿಡುವ ಕಣ್ಣುಗಳಿಂದ ರಾಜಶೇಖರನನ್ನು
ನೋಡುತ್ತಾ ಹೇಳಿದ:
"ಅದೇನೋ ಅದು? ನಮ್ತಂದೆಗೆ ಕಾಗದ ಬರೀಬೇಕೂಂತ ಮಾಡಿದೀಯಾ?
ಸಿ.ಐ.ಡಿ.ಕೆಲ್ಸ! ಅಂಥಾದ್ದೇನಾದ್ರೂ ಮಾಡ್ದೆ ಅಂದ್ರೆ_"
ರಾಜಶೇಖರ ಹೆದರಲಿಲ್ಲ. ಆದರೆ ಅವನಿಗೆ ಬೇಸರವಾಯಿತು, ಕಾಲು ಗಂಟೆ
ಆತ ಹೊಸ ದೀಪದ ಬೆಳಕಿನಲ್ಲಿ ಓದಲು ಯತ್ನಿಸಿದ. ಆದರೆ ದುಗುಡ ಒತ್ತರಿಸಿ ಬಂದು
ದೃಷ್ಟಿ ಮಸುಕಾಯಿತು. ಎಷ್ಟೊಂದು ಉತ್ಸಾಹದಲ್ಲಿ ಹೊಸ ದೀಪವನ್ನು ಕೊಂಡು
ತಂದಿದ್ದ ಆತ! ಈಗ ಎಳ್ಳಷ್ಟೂ ಉತ್ಸಾಹ ಉಳಿದಿರಲಿಲ್ಲ. ಪುಸ್ತಕ ಮಡಚಿ ದೀಪ
ಆರಿಸಿ ಆತ ಚಾಪೆಯ ಮೇಲೆ ಉರುಳಿಕೊಂಡ. ತಲೆದಿಂಬು ಕಣ್ಣೀರಿನಿಂದ ತೊಯ್ದು
ಹೋಯಿತು.

ಮೊದಲು ಚಿಕ್ಕವನು ನಿದ್ದೆ ಹೋದ. ದೊಡ್ಡವನು ಉದ್ರಿಕ್ತವಾಗಿದ್ದ ಮನ