ಪುಟ:Rangammana Vathara.pdf/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

164

ಸೇತುವೆ

ಕೊಡುತ್ತಿದ್ದಳು. ಆಕೆ ಹಿಡಿಯುತ್ತಿದ್ದ ಮೂರು ಬಿಂದಿಗೆ ಹೆಚ್ಚಿನ ನೀರಿನ ಎಂಟಾಣೆಯೂ.
ರಂಗಮ್ಮನಿಗೆ ಬರುತ್ತಿತ್ತು.
"ಎಲ್ಲರೂ ಹೀಗೆಯೇ ಹೊತ್ತಿಗೆ ಸರಿಯಾಗಿ ಬಾಡಿಗೆ ಕೊಟ್ಟರೆ ಎಷ್ಟು ಚೆನ್ನಾ
ಗಿರುತ್ತೆ," ಎಂದು ರಂಗಮ್ಮ ಇತರರ ಕಿವಿಗೆ ಬೀಳುವಂತೆ ವೆಂಕಟಸುಬ್ಬಮ್ಮನನ್ನು
ಹೊಗಳುತ್ತಿದ್ದರು.
ಮೌನದ ಚಿಪ್ಪಿನೊಳಗೆ ಮುದುಡಿಯೇ ಇರುತ್ತಿದ್ದ ವೆಂಕಟಸುಬ್ಬಮ್ಮನನ್ನು ಮನಸ್ಸಿನ
ಹಿಂದೆ ಏನೇನಿದೆಯೆಂದು ತಿಳಿಯಲು ಆರಂಭದಲ್ಲಿ ರಂಗಮ್ಮ ಕುತೂಹಲಿಯಾಗಿದ್ದರು.
ಬಹಳ ಕಾಲದ ಸಾಮಿಪ್ಯದ ಬಳಿಕ ಮಾತ್ರ. ವೆಂಕಟಸುಬ್ಬಮ್ಮನ ಬಾಯಿ ಬಿಡಿಸುವುದು
ಸಾಧ್ಯವಾಯಿತು. ಒಂದು ದಿನ ಮಧ್ಯಾಹ್ನ ಅಳುತಳುತ ಆ ಹೆಂಗಸು ಹೇಳಿದ ಸ್ವಪರಿ
ಚಯವೆಲ್ಲ ಕಣ್ಣೀರಿನ ಕಥೆಯೇ.
ಸ್ವಲ್ಪ ಜಮೀನು ಇತ್ತೆಂಬುದು ನಿಜ. ಎಚ್ಚರಿಕೆಯಿಂದಿದ್ದರೆ ಸುಖವಾಗಿ ದಿನ
ಕಳೆಯಲು ಆದು ಸಾಕಾಗುತ್ತಿತ್ತು. ಆದರೆ ಅವರ ಯಜಮಾನರು ದುಂದು ವೆಚ್ಚಕ್ಕೆ
ಪ್ರಖ್ಯಾತರಾಗಿದ್ದರು. ಹಳ್ಳಿಯಲ್ಲಿರುವುದರ ಬದಲು ಅವರು ಪೇಟೆಯಲ್ಲಿ ಮನೆ
ಮಾಡಿದರು.
"ಅಷ್ಟೇ ಅಲ್ಲ ರಂಗಮ್ನೋರೆ, ಎರಡ್ನೆ ಮದುವೇನೂ ಮಾಡ್ಕೊಂಡ್ರು."
“ಹಾಗೇನು?" ಎಂದರು ರಂಗಮ್ಮ, 'ನಿನ್ನ ಹಾಗೆ ಸಪ್ಪಗಿದ್ದರೆ ಬೇರೆ ಮದುವೆ
ಮಾಡಿಕೊಳ್ಳದೇನು ಮಾಡಿಯಾರು? ಎಂದು ಮನಸಿನೊಳಗೇ ಅಂದುಕೊಂಡರು.
"ಆಕೆಗೆ ಎಷ್ಟು ಜನ ಮಕ್ಕಳು?"
"ಇಬ್ಬರು, ರಂಗಮ್ನೋರೆ. ಎರಡೂ ಹೆಣ್ಣು.”
ಸವತಿಯ ಸಂತಾನ ಹೆಣ್ಣೆoದು ಸಮಾಧಾನಪಡುವುದಷ್ಟೇ ಉಳಿದಿದ್ದುದು
ವೆಂಕಟಸುಬ್ಬಮ್ಮನಿಗೆ!
"ಹೋಗಲಿ, ಎಲ್ಲಾ ಅನ್ಯೋನ್ಯವಾಗಿ ಇದೀರಿ ತಾನೆ?"
“ಹೂಂ.”
ಅದು ನಿಜವಾಗಿರಲಿಲ್ಲ, ಗಂಡನ ಮನೆಯಲ್ಲಿ ವೆಂಕಟಸುಬ್ಬಮ್ಮ ಬರಿಯ
ಪರಿಚಾರಿಕೆಯ ಮಟ್ಟಕ್ಕೆ ಇಳಿದಿದ್ದಳು.
"ಧರ್ಮಾತ್ಮ ಮಕ್ಕಳು ಓದೋಕಾದರೂ ವ್ಯವಸ್ಥೆ ಮಾಡಿದಾನಲ್ಲ."
“ಹೂಂ."
ಅದು ನಿಜವಾಗಿರಲಿಲ್ಲ. ಹಿರಿಯ ಹೆಂಡತಿ ತನ್ನ ಆಭರಣಗಳನ್ನೆಲ್ಲ ಮಾರಿ
ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ನಿರ್ವಹಿಸುತ್ತಿದ್ದಳು.
ಮಕ್ಕಳ ಪ್ರಸ್ತಾಪ ಬಂದಾಗ ಆಕೆಯೆಂದಳು;
"ದೊಡ್ಡ ಹುಡುಗನ ಮೇಲೆ ಯಜಮಾನರಿಗೆ ತುಂಬಾ ಪ್ರೀತಿ."

ಎಂತಹ ಅಲ್ಪ ಸಂತೋಷಿ ಆ ವೆಂಕಟಸುಬ್ಬಮ್ಮ!