ಪುಟ:Rangammana Vathara.pdf/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

167

"ಹೋದ ವರ್ಷವೆಲ್ಲಾ ಬೆಂಗಳೂರಿಗೆ ಬರ್ಲೇ ಇಲ್ವೇನೋ?"
"ಇಲ್ಲ, ಒಂದೂವರೆ ವರ್ಷದ ಮೇಲಾಯ್ತು ಬೆಂಗಳೂರಿಗೆ ಬಂದು."
ಹೆಂಡತಿ ಮಕ್ಕಳನ್ನು ಹೀಗೆ ಬಿಟ್ಟಿದ್ದ ಈತನಿಗೆ ನಾಚಿಕೆ ಎಂಬುದೇನೂ ಇಲ್ಲ
ವೆಂಬುದು ಸ್ಪಷ್ಟವಾಗಿತ್ತು. 'ಒಳ್ಳೇ ಗಂಡಸು! ಎಂದು ಮನಸ್ಸಿನಲ್ಲೇ ಅಂದುಕೊಂಡು
ರಂಗಮ್ಮ ಏನನ್ನೋ ಗೊಣಗಿದರು.
"ಆಗಲಿ, ಈಗಲಾದರೂ ಬಂದಿರಲ್ಲ, ಸಂತೋಷ," ಎಂದು ನುಡಿದು ರಂಗಮ್ಮ
ಟೀಕೆ ಅಷ್ಟು ಸಾಕೆಂದು ಮುಂದೆ ನಡೆದರು. ಹೆಬ್ಬಾಗಿಲು ಸಮೀಪಿಸುವುದರೊಳಗೇ
ಅವರ ಸ್ವರ ಕೇಳಿಸಿತು.
"ಯಾವುದೋ ಹಸು ಒಳಕ್ಕೆ, ಬಂದ್ಬಿಟ್ಟಿದೆ! ಯಾರೇ ಅದು ಗೇಟು ತೆರ್ದಿಟ್ಟು
ಬಂದಿರೋದು? ಹೈ....ಹೈ....!"
ತನ್ನ ಗಂಡ ತೆರೆದಿಟ್ಟು ಬಂದಿರಬೇಕೆಂದು ವೆಂಕಟಸುಬ್ಬಮ್ಮನಿಗೆ ಹೊಳೆಯಿತು.
ಆದರೆ ಆ 'ಯಜಮಾನ'ರಿಗೆ ಅದು ಅರ್ಥವಾಗಲಿಲ್ಲ. ಹೆಂಗಸರ ಅಂತಹ ಕೂಗಾಟ
ಗಳಿಗೆ ಗಮನ ಕೊಡುವ ಅಭ್ಯಾಸವೇ ಅವರಿಗೆ ಇರಲಿಲ್ಲ.
"ಕೋಟು ಬಿಚ್ಬಾರ್ದೆ? ಸ್ನಾನಕ್ಕೆ ನೀರಿಡ್ತೀನಿ...." ಎಂದು ವೆಂಕಟಸುಬ್ಬಮ್ಮ
ಗಂಡನನ್ನು ಉದ್ದೇಶಿಸಿ ಹೇಳಿದಳು.
"ಏನೂ ಬೇಡ, ಸ್ನಾನಮಾಡ್ಕೊಂಡೇ ಬಂದೆ."
ಹುಡುಗರ ಊಟವಾಗಿತ್ತು. ಆಕೆ ಇನ್ನೂ ಏನನ್ನೂ ತೆಗೆದುಕೊಂಡಿರಲಿಲ್ಲ.
"ಊಟಕ್ಕೇಳಿ ಹಾಗಾದರೆ."
ತನ್ನ ಪಾಲಿನ ಊಟವನ್ನು ಹೆಂಡತಿ ಕೊಡುತ್ತಾಳೆಂದು ಆ ಗಂಡನಿಗೆ ಗೊತ್ತಿತ್ತು.
'ನಿನಗೇನು ಮಾಡ್ತೀಯಾ?' ಎಂದು ಆತ ಕೇಳಲಿಲ್ಲ. ಮತ್ತೊಮ್ಮೆ ಬೇಯಿಸುತ್ತಾಳೆ
ಎಂಬುದನ್ನೂ ಅವರು ತಿಳಿದಿದ್ದರು.
ತಂಬಿಗೆ ನೀರನ್ನೆತ್ತಿಕೊಂಡು ಓಣಿಯುದ್ದಕ್ಕೂ ಅವರು ಅತ್ತಿತ್ತ ದೃಷ್ಟಿ ಹಾಯಿ
ಸುತ್ತ ಹೋಗಿ ಬಂದರು. ಮಾತಿಲ್ಲದೆಯೇ ಅವರ ಊಟ ಮುಗಿಯಿತು. ಹೆಂಡತಿ
ಕೊಟ್ಟ ಅಡಿಕೆ ಪುಡಿಯನ್ನಷ್ಟು ಬಾಯಿಗೆ ಹಾಕಿಕೊಂದು ಅವರು ಮತ್ತೆ ಕೋಟಿಗೆ ಕೈ
ಹಾಕಿದರು.
"ಇದೇನು ಹೊರಟೇಬಿಟ್ರಾ?"
"ಹೂಂ. ಕೋರ್ಟಿಗೆ ಹೋಗ್ಬೇಕು. ಆ ದಿವಸ ಡಿಕ್ರಿ ಆಗಿರ್ಲಿಲ್ವೆ? ಅದರ
ಅಪೀಲು ಇವತ್ತು."
"ಆಮೇಲೆ ಬರ್ತೀರಿ ತಾನೆ?"
"ಇಲ್ಲ. ಸಾಯಂಕಾಲ ಐದು ಘಂಟೆ ಬಸ್ಸಿಗೇ ಹೋಗ್ಬೇಕು."
ವೆಂಕಟಸುಬ್ಬಮ್ಮನಿಗೆ ಅಳು ಚಿಮ್ಮಿ ಬಂದು, ಸ್ವರ ಗಂಟಲಲ್ಲೆ ಉಡುಗಿತು.

ಆದರೂ ಪ್ರಯಾಸಪಟ್ಟು ಆಕೆ ಸುಧಾರಿಸಿಕೊಂಡಳು. ತನಗೋಸ್ಕರ ಆತ ರಾತ್ರೆ ನಿಲ್ಲು