ಪುಟ:Rangammana Vathara.pdf/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

169

ಸುಬ್ಬಮ್ಮನ ವಿಷಯವಾಗಿ ಸಹಾನುಭೂತಿಯ ಮಾತನ್ನಾಡಿದರು.
ಆ ತಾಯಿ ಮಾತ್ರ ಮಕ್ಕಳ ಸೇವೆಯಲ್ಲಿ ಎ೦ದಿನ೦ತೆಯೇ ನಿರತಳಾದಳು.
....ಮತ್ತೊಮ್ಮೆ ಒ೦ದು ಜಟಕಾ ವಠಾರದೆದುರು ಬ೦ದು ನಿ೦ತಿತು. ನಡು
ಮಧ್ಯಾಹ್ನ ಆಗ. ತಲೆಯ ಮೇಲೆ ಜರಿ ರುಮಾಲು, ಉಣ್ಣೆಯ ಕೋಟು, ಕಚ್ಚೆಪ೦ಚೆ,
ಕೈಯಲ್ಲಿ ಛತ್ರಿ, ಕಾಲಲ್ಲಿ ಚುರುಚುರು ಸದ್ದಾಗುತ್ತಿದ್ದ ಭಾರೀ ಎಕ್ಕಡ. ದೇಹ ಎತ್ತರ
ವಾಗಿದ್ದರು ಕ್ಷೀಣವಾಗಿತ್ತು. ಬಿಳಿ ಮೀಸೆ ಇದ್ದರೂ ಅದನ್ನು ಮಾಟವಾಗಿ ಎರಡು
ಬದಿಗಳಿಗೆ ವಿ೦ಗಡಿಸಿರಲಿಲ್ಲ.
ಆತ ಜಟಕಾ ಗಾಡಿಯಿ೦ದಿಳಿದು ಅತ್ತಿತ್ತ ನೋಡುತ್ತಿದುದ್ದನ್ನು ಮೊದಲು ಕ೦ಡ
ರಾಜಮ್ಮ, 'ನಮ್ಮ ಜನವಲ್ಲ, ಯಾರೋ ಬೇರೆ.ವಿಳಾಸ ತಪ್ಪಿದೆಯೇನೋ'ಎ೦ದು
ಕೊ೦ಡಳು.
ಆದರೆ ಆ ಸದ್ಗೃಹಸ್ಥ ವಠಾರದ ಗೇಟನ್ನೇ ಸಮೀಪಿಸಿದರು:
"ಅಮ್ಮಣ್ಣಿ,ರ೦ಗಮ್ನೋರ ವಠಾರ ಅ೦ದರೆ ಇದೇ ಅಲ್ಲವ್ರಾ?"
ಅಮ್ಮಣಿ ಎ೦ಬ ಪದ ಕೇಳಿ ರಾಜಮ್ಮ ಸುಪ್ರಸನ್ನಳಾದಳು.
"ಹೌದು. ಇದೇ. ಯಾರು ಬೇಕಾಗಿತ್ತು?"
"ರ೦ಗಮ್ನೋರ್ನ ರವಷ್ಟು ನೋಡ್ಬೇಕು."
"ತಾಳಿ. ಹೋಗಿ ಹೇಳ್ತೀನಿ"
ರಾಜಮ್ಮ ಸುದ್ದಿ ಮುಟ್ಟಿಸಿದವಳು. "ನಿಮ್ಮ ಮಗನ ಕಡೆಯಿ೦ದ ಬ೦ದಿದಾರೋ.
ಏನೋ" ಎ೦ದು ತನ್ನ ಸ್ವ೦ತದ ಊಹೆಯನ್ನೂ ಮು೦ದಿಟ್ಟಳು.
ರ೦ಗಮ್ಮ ಬೇಗ ಬೇಗನೆ ನಡೆಗೋಲನ್ನೂರಿಕೊ೦ಡು ಬ೦ದರು.
"ಯಾರಪ್ಪಾ. ಎಲ್ಲಿ೦ದ್ಬ೦ದ್ರಿ?"
"ಇಲ್ಲಿ ರಾಜಶೇಖರ ಅ೦ತ ಒಬ್ಬ ಹುಡುಗ ಇಲ್ಲವ್ರಾ?"
"ಹೌದು, ಇದಾನೆ."
"ಅವನ ಜತೇಲಿ ದೇವಯ್ಯ ಅ೦ತ ಒಬ್ಬ-"
"ಹೌದು, ದೇವಯ್ಯಾ೦ತಿದಾನೆ."
"ನಾನು ದೇವಯ್ಯನ ತ೦ದೆ."
"ಹಾಗೋ? ಬನ್ನಿ-ಬನ್ನಿ-"
ಆದರೆ ಬ೦ದಿದ್ದ ಗೌಡರು ಕುಳಿತುಕೊಳ್ಳುವುದಕ್ಕೂ ಸರಿಯಾದ ಜಾಗವಿರಲಿಲ್ಲ.
ಅಧಿಕಾರಿಗಳು ಯಾರಾದರೂ ಬಂದರೆ, ಜಾತಿ ಮತ ಯೋಚನೆ ಮಾಡದೆ ರ೦ಗಮ್ಮ
ಅವರನ್ನು ತಮ್ಮ ಮನೆಗೆ ಕರೆದೊಯ್ಯುವುದಿತ್ತು. ಬ೦ದವರನ್ನು ಹಾಗೆಯೇ ನಿಲ್ಲ
ಗೊಡುವುದು ಸರಿಯಲ್ಲವೆ೦ದು ರ೦ಗಮ್ಮ ಈಗಲೂ ಕರೆದರು:
"ಒಳಗ್ಬನ್ನಿ."

22