ಪುಟ:Rangammana Vathara.pdf/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

178

ಸೇತುವೆ

'ಒಂಟಿಯಾಗಿಯೇ ಎಷ್ಟು ದಿನ ಇರೋದು ಸಾಧ್ಯ?' ಒಂದು ಹೆಣ್ಣು ಜೀವನದ ಸ್ನೇಹ
ವನ್ನು ಆತನ ಮನಸ್ಸು ದೇಹಗಳೆರಡೂ ಬಯಸುತ್ತಿದ್ದುವು, ಅದಕ್ಕೆಲ್ಲ ಕಳಶವಿಡುವಂತೆ
ಅಹಲ್ಯೆಯ ವಿವಾಹ ಪ್ರಕರಣ ಆತನ ಮೇಲೆ ಬಲವಾದ ಪರಿಣಾಮವನ್ನುಂಟು
ಮಾಡಿತ್ತು. ಪ್ರೀತಿಯ ವಿಷಯ, ವಿವಾಹದ ವಿಷಯ,ಅಹಲ್ಯೆ_ವೆಂಕಟೇಶರು ಒಬ್ಬ
ರೊಡನೊಬ್ಬರು ಮಾತನಾಡಿದ್ದರೋ ಇಲ್ಲವೋ, ಆತನಿಗೆ ತಿಳಿಯದು. ಆದರೆ ಅಷ್ಟೆಲ್ಲ
ರಂಪವಾದ ಮೇಲೆ, "ಅಹಲ್ಯೆಯನ್ನೇ ಮದುವೆಯಾಗ್ತೇನೆ" ಎಂದು ವೆಂಕಟೇಶ ಹೇಳ
ಬೇಗಿತ್ತು. ಆದರೆ ಆತ ಆಂತಹ 'ಗಂಡಸುತನ' ತೋರಲಿಲ್ಲ. ಅದಕ್ಕಾಗಿ ಆತನ
ನ್ನೆಂದೂ ಚಂದ್ರಶೇಖರಯ್ಯ ಕ್ಷಮಿಸಲಾರ. ಜಯರಾಮುವಿನೆದುರು ವೆಂಕಟೇಶನನ್ನು
ಒಂದೆರಡು ಸಾರಿ ಬೈದು ಚಂದ್ರಶೇಖರಯ್ಯ ಸ್ವಲ್ಪ ತೃಪ್ತಿಪಟ್ಟುಕೊಂಡಿದ್ದ. ಏನಾದರೂ
ನೆಪ ಮಾಡಿಕೊಂಡು ರಾಮಚಂದ್ರಯ್ಯನೊಡನೆ ಆತ್ಮೀಯವಾಗಿ ಆಗಾಗ್ಗೆ ಮಾತ
ನಾಡಿದ್ದ. ಆದರೆ ಆ ಪ್ರಕರಣ ಸ್ವತಃ ಅವನಿಗೇ ಸವಾಲು ಹಾಕಿತ್ತು: 'ನಿನ್ನ ವಿಷಯ
ವೇನು? ರಾಧೆಯ ಬಗ್ಗೆ ನಿನ್ನ ಅಭಿಪ್ರಾಯವೇನು?'
ಆ ಅಭಿಪ್ರಾಯಕ್ಕೆ ಸಂಬಂಧಿಸಿ ಅವನ ಮನಸ್ಸಿನಲ್ಲಿ ಈಗ ಯಾವ ಶಂಕೆಯೂ
ಉಳಿದಿರಲಿಲ್ಲ.
ಈ ಬೀದಿಯಲ್ಲಿ ಬಸ್ಸುಗಳಲ್ಲಿ ಹುಡುಗಿಯರನ್ನು ನೋಡಿದರೂ ರಾಧೆಯ ನೆನಪು
ಆತನಿಗೆ ಆಗುತ್ತಿತ್ತು. ದಾಂಪತ್ಯ ಜೀವನದ ಯೋಚನೆಗಳು ಮೂಡಿದಾಗಲೆಲ್ಲ
ರಾಧೆಯೇ ಕಣ್ಣೆದುರು ನಿಲ್ಲುತ್ತಿದ್ದಳು.
ಚಂದ್ರಶೇಖರಯ್ಯ ತನಗೆ ತಾನೇ ಪ್ರಶ್ನಿಸಿಕೊಂಡ:
'ರಾಧೆಯಿಲ್ಲದೆ ಹೋಗಿದ್ದರೆ, ಖಾಲಿಯಾದ ಜಾಗವನ್ನು ಜಯರಾಮುಗೆ
ಕೊಡಿಸ್ತಿದ್ದೆಯೇನು?'
ಅವನ 'ಅಹಂ' ಎಂದಿತು:
"ಓಹೋ, ಕೊಡಿಸ್ತಿದ್ದೆ.'
ಅದು ಆತ್ಮವಂಚನೆಯ ಉತ್ತರ ಎಂಬುದು ಅವನಿಗೆ ಗೊತ್ತಿತ್ತು.
ಜಯರಾಮುಗೆ, ಚಂದ್ರಶೇಖರಯ್ಯ ಪ್ರತಿನಿಧಿಯಾಗಿ ದುಡಿಯುತ್ತಿದ್ದ ವಿಮಾ
ಸಂಸ್ಥೆಯ ಕಚೇರಿಯಲ್ಲಿ ಕೆಲಸ ಸಿಕ್ಕಿತು.
ಆತನ ತಾಯಿ, ದೇವರೆದುರು ತುಪ್ಪದ ದೀಪ ಹಚ್ಚಿಟ್ಟು ಮಗ ಮಂಡಿಯೂರಿ
ಕೈಮುಗಿಯುವಂತೆ ಮಾಡಿದಳು.
ಬೇಗನೆ ಹೊರಟುಬರಲು ತನ್ನ ಗಂಡನಿಗೆ ಕಾಗದ ಬರೆಯಬೇಕೆಂದು ಆಕೆ
ಯೋಚಿಸಿದಳು. ಆದರೆ ಅದರ ಅಗತ್ಯವಿಲ್ಲವೆಂಬುದು ತನಗೇ ಹೊಳೆದು, ಕೆಲಸ
ಸಿಕ್ಕಿದ ವಿಷಯವನ್ನಷ್ಟೇ ಬರೆದು ತಿಳಿಸುವಂತೆ ಜಯರಾಮುಗೆ ಹೇಳಿದಳು: 'ಚಂದ್ರ
ಶೇಖರಯ್ಯ ಕೆಲಸ ಕೊಡಿಸಿದ್ದು' ಎಂಬುದನ್ನೂ ಬರೆಯುವಂತೆ ಸೂಚಿಸದಿರಲಿಲ್ಲ.
ಆ ತಾಯಿ ಕೆಳಕ್ಕಿಳಿದು ತಾನು ಸಂಧಿಸಿದವರಿಗೆಲ್ಲ ಆ ಸುದ್ದಿ ಹೇಳುತ್ತ ಬಂದಳು.