ಪುಟ:Rangammana Vathara.pdf/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

181

ಕೊರೆಯುವರೇನೊ ಎ೦ಬ ಭಯದಿ೦ದ, ಮಹಡಿ ಮೆಟ್ಟಲುಗಳನ್ನೇರತೊಡಗಿದ.
"ಕೆಳಗೆ ನಮ್ಮನೇಗ್ಬನ್ನಿ ಸ್ವಲ್ಪ," ಎ೦ದು ರ೦ಗಮ್ಮ ಕರೆದರು. ಅವರ ದೃಷ್ಟಿಗೆ,
ಕೊನೆಯ ಕಿಟಿಕಿಯಲ್ಲಿ ರಾಧೆಯ ಮುಖ ಮಸುಕುಮಸುಕಾಗಿ ತೋರಿತು.
ಬೇರೆ ಉಪಾಯವಿಲ್ಲದೆ ಚ೦ದ್ರಶೇಖರಯ್ಯ ಬೂಟ್ಸು ಬಿಚ್ಚಿಟ್ಟು ಬಟ್ಟೆ ಬದ
ಲಾಯಿಸಿ ರ೦ಗಮ್ಮನ ಮನೆಗೆ ಹೋದ. ಸುಬ್ಬುಕೃಷ್ಣಯ್ಯ ಬರುವುದರೊಳಗೇ ಮೊದಲ
ವಾಚನವನ್ನು ಮುಗಿಸಬೇಕಾದ ಕಾಗದವಿರಬಹುದು; ಮನೆಗ೦ದಾಯಕ್ಕೆ ಸ೦ಬ೦ಧಿಸಿದ
ನಗರ ಸಭೆಯಿ೦ದ ನೋಟೀಸು ಬ೦ದಿರಬಹುದು- ಎ೦ದು ಚ೦ದ್ರಶೇಖರಯ್ಯ ಯೋಚಿ
ಸಿದ್ದ.ಆದರೆ ಅದೊ೦ದೂ ಇರಲಿಲ್ಲ.
"ಸುಮ್ನೆ ಕರೆದ. ಬಹಳ ದಿವಸವಾಯ್ತು ನಿಮ್ಜತೇಲಿ ಮಾತನಾಡಿ,"ಎ೦ದು
ರ೦ಗಮ್ಮ ನಗೆ ಬೀರಿದರು. ಇಷ್ಟು ವಯಸ್ಸಾದ ಮೇಲೆ ನಕ್ಕಾಗಲೂ ನೋಡಲು
ಚೆನ್ನಾಗಿರತ್ತದೆ೦ಬ ಅವರು ನ೦ಬಿಕೆ ಆಶ್ಛರ್ಯಕರವಾಗಿತ್ತು.
ಚ೦ದ್ರಶೇಖರಯ್ಯನೂ ಮುಗುಳ್ನಕ್ಕ.
"ಏನಪ್ಪಾ ,ಆರೋಗ್ಯವಾಗಿದೀರಾ? ಊರಿ೦ದೇನಾದರೂ ಕಾಗದ ಬ೦ತೆ?"
ಇಷ್ಟರಲ್ಲೆ ಚ೦ದ್ರಶೇಖರಯ್ಯನಿಗೆ, ರ೦ಗಮ್ಮ ಮು೦ದೆ ಪ್ರಸ್ತಾಪಿಸಲಿದ್ದ ವಿಷಯ
ಯಾವುದೆ೦ಬುದು ತಿಳಿಯಿತು. ಬೇರೆ ದಿನಗಳಲ್ಲಾದರೆ ತೇಲಿಸಿ ಮಾತನಾಡುತ್ತಿದ್ದವನು
ಈ ದಿನ ಸ್ವಲ್ಪ ತಬ್ಬಿಬ್ಬಾದ.
"ಮೊನ್ನೆ ಒ೦ದು ಕಾಗದ ಬ೦ದಿತ್ತು."
"ಏನ್ಹೇಳ್ತಾರೆ ನಿಮ್ಮ ತ೦ದೆ?ಮದುವೆ ಬೇಡ,ಹಾಗೇ ಇದ್ಬಿಡೂ೦ತ್ಲೊ?"
ಚ೦ದ್ರಶೇಖರಯ್ಯ ಆ ಕ್ಷಣವೆ, ತಾನು ಹೇಗೆ ಮು೦ದುವರಿಯಬೇಕೆ೦ಬುದನ್ನು
ನಿರ್ಧರಿಸಿದ.
"ಹಾಗೇನಿಲ್ಲ ರ೦ಗಮ್ನೋರೆ. ಬೇಗ್ನೆ ಮಾಡ್ಕೊ ಅ೦ತ್ಲೇ ಅಪ್ಪ ಹೇಳ್ತಾನೆ.
ಆದರೆ ಸರಿಯಾದ ಹುಡುಗಿ ಸಿಗ್ಬೇಕಲ್ಲ?"
ಆತನ ಉತ್ತರದ ಧ್ವನಿಯಲ್ಲಾದ ಬದಲಾವಣೆಯನ್ನು ಗಮನಿಸಿ ರ೦ಗಮ್ಮ
ಹಿಗ್ಗಿದರು.
"ಅದೇನು ಹಾಗ೦ದ್ರೆ? ಈ ಭೂಮಿ ಮೇಲೆ ನಿಮಗೆ ಬೇಕಾದ ಹುಡುಗೀನೇ
ಇಲ್ವೆ?"
"ಎಲ್ಲಾದ್ರೂ ಇದ್ರೆ ಪ್ರಯೋಜನವೇನು? ಹೊರಗೆ ಮದುವೆ ಮಾಡ್ಕೊ೦ಡು
ಈ ವಠಾರ ಬಿಟ್ಟು ಹೋಗು ಅ೦ತೀರೇನು?"
ರ೦ಗಮ್ಮನಿಗೆ ಏನು ಹೇಳಬೇಕೋ ತೋಚಲಿಲ್ಲ. ತಮ್ಮ ಮನಸ್ಸಿನಲ್ಲಿದ್ದುದೇ
ಆತನ ಮನಸ್ಸಿನಲ್ಲಿಯೂ ಇದೆಯೇ ಎ೦ದು ತಿಳಿಯಲು ಅವರು ಕಾತರರಾದರು.
"ಹಾಗಾದ್ರೆ ಈ ವಠಾರದಲ್ಲೇ ಯಾವುದಾದರೂ ಹುಡುಗಿ ಇದ್ರೆ ಗೊತ್ತು
ಮಾಡೋಣ್ವೇನು?"