ಪುಟ:Rangammana Vathara.pdf/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

184

ಸೇತುವೆ

ಮಾತು ಆರಂಭಿಸಲು ವಾತಾವರಣ ಅನುಕೂಲವಾಗಿದ್ದಂತೆ ಕಂಡಿತು.
"ಚಂದ್ರಶೇಖರಯ್ಯ, ನಿಮ್ಮನ್ನು ಒಂದು ವಿಷಯ ಕೇಳ‍್ಬೇಕೂಂತ. ತಪ್ಪು
ತಿಳ್ಕೊಳ್ಳೊಲ್ಲ ತಾನೆ?"
"ಕೇಳಿ, ಅದಕ್ಕೇನು?"
"ವಿಷಯ ವೈಯಕ್ತಿಕ."
"ಏನೂ ಪರವಾಗಿಲ್ಲ. ನಾನಂತೂ ನನ್ನ ವೃತ್ತೀಲಿ ಯಾವಾಗ್ಲೂ ವೈಯಕ್ತಿಕ
ಪ್ರಶ್ನೆನೇ ಕೇಳೋದು."
ಶಂಕರನಾರಾಯಣಯ್ಯನಿಗೆ ನಗು ಬಂತು.
"ನೀವು ಯಾಕೆ ಮದುವೆ ಮಾಡ್ಕೋಬಾರದು?"
"ಮಾಡ್ಕೊಂಡರಾಯ್ತು. ಮದುವೆಯಾದೋರೆಲ್ಲ ವಠಾರದಲ್ಲಿ ಅನುಭವಿ
ಸ್ತಿರೋ ಸುಖ ಕಾಣಿಸೋಲ್ವೆ?"
"ಅದೇನೋ ನಿಜ ಅನ್ನಿ."
ಶಂಕರನಾರಾಯಣಯ್ಯನಿಗೆ ಗೊತ್ತಿತ್ತು. ಅದು ಪೂರ್ತಿ ನಿಜವಾಗಿರಲಿಲ್ಲ.
ತಾನಿರಲಿಲ್ಲವೆ? ತಾನು ದಾಂಪತ್ಯ ಜೀವನವನ್ನು ರೌರವ ನರಕವೆಂದು ಭಾವಿಸಿದ್ದನೆ?
ಆದರೆ, ಸಂಸಾರ ಸುಖದ ವಿಷಯವಾಗಿ ತನ್ನ ಅಭಿಪ್ರಾಯ ಬೇರೆ ಎಂಬುದನ್ನು ಅಲ್ಲಿ
ಬಹಿರಂಗವಾಗಿ ಹೇಳಲು ಆತ ಸಮರ್ಥನಾಗಿರಲಿಲ್ಲ.
ಬಲು ಹಿತಕರವಾಗಿದ್ದ ಆ ಸಂಭಾಷಣೆಯನ್ನು ದೀರ್ಘಗೊಳಿಸೋಣವೆಂದು
ಚಂದ್ರಶೇಖರಯ್ಯ ಹಾಗೆ ಹೇಳಿದ್ದರೆ, ಆ ಶಂಕರನಾರಾಯಣಯ್ಯ ಮಾತನ್ನೇ ನಿಲ್ಲಿಸಿ
ಬಿಟ್ಟಿದ್ದ! ಆತನ ಬಾಯಿ ತೆರೆಸಲು ತಾನೇ ಮಾತನಾಡಬೇಕಾಯಿತು.
"ಆದರೆ, ಗಂಡಸಾಗಲಿ ಆಯುಷ್ಯವೆಲ್ಲ ಒಂಟಿಯಾಗೇ ಇರಬೇಕೊಂತ ನನ್ನ
ಅಭಿಪ್ರಾಯವಲ್ಲ."
ಅಷ್ಟು ಹೇಳಿ, ಹುಡುಗ ಮೇಜಿನ ಮೇಲಿರಿಸಿ ಹೋದ ಕಾಫಿಯ ಗ್ಲಾಸನ್ನು
ಚಂದ್ರಶೇಖರಯ್ಯ ಕೈಗೆತ್ತಿಕೊಂಡ.
ನಿರಾಶನಾಗಬೇಕಾದ್ದಿಲ್ಲ ಎಂದುಕೊಳ‍್ಳುತ್ತ ಶಂಕರನಾರಾಯಣಯ್ಯ ಹೇಳಿದ:
"ನೀವು ಮದುವೆ ಮಾಡ್ಕೋಳ್ಳೋ ಹಾಗಿದ್ದರೆ ನಮ್ಮ ಕಡೇದೊಂದು ಹುಡುಗಿ
ಇದೆ."
ಚಂದ್ರಶೇಖರಯ್ಯನ ಮುಖ ಒಮ್ಮೆಲೆ ಗಂಭೀರವಾಯಿತು. ಇನ್ನು ಆ ಮಾತು
ಕತೆಯನ್ನು ಬರಿಯ ತಮಾಷೆಯಾಗಿ ಪರಿಗಣಿಸುವಂತಿರಲಿಲ್ಲ.
"ಕ್ಷಮಿಸಿ ಶಂಕರನಾರಾಯಣಯ್ಯ, ನನಗೆ ಹುಡುಗಿ ಗೊತ್ತಾಗಿದೆ. ಇನ್ನು
ನಾಲ್ಕು ತಿಂಗಳಲ್ಲೇ ಮದುವೆ."
"ಸಂತೋಷ!"
ಶಂಕರನಾರಾಯಣಯ್ಯ ನಕ್ಕರೂ, ರಾಧೆಗಾಗಿ ಚಂಪಾವತಿಯನ್ನು ಸಂತೋಷ