ಪುಟ:Rangammana Vathara.pdf/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

185

ಪಡಿಸುವುದಕ್ಕಾಗಿ ತಾನೇನನ್ನೂ ಮಾಡಲಾಗಲಿಲ್ಲವಲ್ಲ ಎಂದು ಆತನಿಗೆ ಸಂಕಟವಾಯಿತು.
ಆ ದುಃಖವನ್ನು ನುಂಗುವಂತೆ ಗ್ಲಾಸಿನಲ್ಲಿದ್ದ ಕಾಫಿಯನ್ನು ಒಂದೇ ಗುಟುಕಿಗೆ ಕುಡಿದ.
ಬಲವಾಗಿ ಒಂದು ದಮ್ ಸಿಗರೇಟನ್ನು ಸೇದಿದ.
ಶಂಕರನಾರಾಯಣಯ್ಯನ ಕಡೆಯ ಹುಡುಗಿಯ ಬಗ್ಗೆ ಚಂದ್ರಶೇಖರಯ್ಯನಿಗೆ
ಕನಿಕರವಾಯಿತು.
"ಸೋ ಸಾರಿ ಶಂಕರನಾರಾಯಣಯ್ಯ. ನನ್ನದೆಲ್ಲ ಆಗ್ಹೋಯ್ತು."
"ಏನೂ ಪರವಾಗಿಲ್ಲ. ನೀವು ಮದುವೆ ಮಾಡ್ಕೋಬೇಕೂಂತ ನಿರ್ಧಾರ
ಮಾಡಿದೀರಲ್ಲ-ಅದೇ ಸಂತೋಷ."
"ನನ್ನ ಗೊತ್ತಿನಲ್ಲಿ ಯಾವುದಾದರೂ ಗಂಡು ಇದ್ದರೆ ಹೇಳ್ತೀನಿ."
"ಓ ಯೆಸ್, ದಯವಿಟ್ಟು ಹೇಳಿ. ಉಪಕಾರವಾಗುತ್ತೆ."
"ಹೊರಡೋಣ್ವೊ?ಮನೆ ಕಡೆ ತಾನೆ?"
"ಹೌದು.ನಡೀರಿ."
......ಮನೆ ಸೇರಿದ ಮೇಲೆ ಶಂಕರನಾರಾಯಣಯ್ಯ ಬೇಸರದ ಧ್ವನಿಯಲ್ಲಿ
ಹೇಳಿದ:
"ಚಂದ್ರಶೇಖರಯ‍್ಯನಿಗೆ ಆಗ್ಲೇ ಮದುವೆ ಗೊತ‍್ತಾಗ್ಬಿಟ್ಟಿದೆ ಕಣೇ."
"ಆ ವಿಷಯ ನಿಮಗಿಂತ ಮುಂಚೆ ನನಗೇ ತಿಳೀತು."
ಸಂತೋಷದ ಧ್ವನಿ. ಅದು ಅರ್ಥವಾಗದೆ ಹೆಂಡತಿಯ ಮುಖವನ್ನು ಆತ
ಮಿಕಿಮಿಕಿ ನೋಡಿದ. ಚಂಪಾ ಕೇಳಿದಳು:
"ಅದ್ಯಾಕೆ ಹಾಗೆ ನೋಡ್ತಿದೀರಾ?"
"ರಾಧೆ ವಿಷಯ ಆತನ ಜತೇಲಿ ಪ್ರಸ್ತಾಪಿಸ್ಬೇಕೂಂತ ನೀನು ಹೇಳಿದ್ದ ಹಾಗೆ
ನೆನಪು."
"ಹೌದು. ಏನಾಯ್ತು?"
"ಏನೂ ಆಗೋದು? ನೀನು ಸಲಹೆ ಮಾಡಿದ್ದೇ ತಡವಾಯ್ತು. ಅಂತೂ ರಾಧೆಗೆ
ಭಾಗ್ಯ ಇಲ್ಲ."
"ರಾಧೆಗೆ ಭಾಗ್ಯ ಇಲ್ಲ? ಅದೇನ್ರೀ ಹಾಗಂದ್ರೆ? ಅವಳೇ ಕಣ್ರೀ ಹುಡುಗಿ!"
"ಯಾರು-ಚಂದ್ರಶೇಖರಯ್ಯ..."
"ಮದುವೆ ಪ್ರಸ್ತಾಪ ಮಾಡೋಕೆ ಹೋದೋರು ಹುಡುಗಿ ಯಾರೂಂತ ಕೂಡಾ
ಕೇಳ್ಲಿಲ್ವೆ ನೀವು?"
'ಬೇಸ್ತು ಬಿದ್ದ' ಗಂಡನನ್ನು ಕಂಡು ಚಂಪಾವತಿಗೆ ಮೋಜೆನಿಸಿತು. ಆಕೆ ಬಿದ್ದು
ಬಿದ್ದು ನಕ್ಕಳು. ಆದರೆ ನಗೆಯ ಸುಖವನ್ನು ಬೇಕಾದ ಹಾಗೆ ಅನುಭವಿಸಲು ಆಕೆಯ ದೇಹ ಸಿದ್ಧವಿರಲಿಲ್ಲ. ಉಸಿರಿಗಾಗಿ ಆಕೆ ಅರ್ಧದಲ್ಲೇ ತಡೆದು ನಿಂತಳು:

24