ಪುಟ:Rangammana Vathara.pdf/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

188

ಸೇತುವೆ

......ಇಷ್ಟೆಲ್ಲಾ ಗಲಿಬಿಲಿ ವಠಾರದಲ್ಲಿದ್ದರೂ ಹಂಗಸರೆಲ್ಲರ ಗಮನ ಕೊನೆಯ
ಮನೆಯ ಕಡೆಗೇ ಇತ್ತು.
ನಾರಾಯಣಿ ಮಲಗಿದ್ದ ಕಡೆಯೆಲ್ಲ,-ಅದಕ್ಕಿದಿರು ಗೋಡೆಯ ಬಳಿ ಚಂಪಾವತಿ
ಯನ್ನು ಮಲಗಿಸಿದ್ದರು.
ವಠಾರದಲ್ಲಿ ದೀಪ ಆರಿಸದೇ ಇದ್ದ ಆ ರಾತ್ರೆಯೆಲ್ಲ ಸಣ್ಣನೆ ನೋವು ನರಳಾಟ
ಕೊನೆಯ ಮನೆಯಿಂದ ಕೇಳಿಸುತ್ತಿತ್ತು.
ಬಹಳ ಹೊತ್ತು ರಂಗಮ್ಮನಿಗೆ ನಿದ್ದೆ ಬರಲಿಲ್ಲ. ನಡುರಾತ್ರೆಯಲ್ಲೊಮ್ಮೆ
ಅವರೆದ್ದು ಗೋಡೆ ಮುಟ್ಟಿಕೊಂಡು ಓಣಿಯುದ್ದಕ್ಕೂ ಹೋಗಿ ಬಂದರು. ವಠಾರದಿಂದ
ಹೊರಡುತ್ತಿದ್ದ ನಿದ್ದೆಯ ಉಸಿರಾಟದ ಗೊರಕೆಯ ಸ್ವರಗಳು ಯಾವುವೂ ಅವರಿಗೆ
ಅಪರಿಚಿತವಾಗಿರಲಿಲ್ಲ.
...ಒಮ್ಮೆಲೆ ಕಾಮಾಕ್ಷಿ ಕೂಗಿಕೊಂಡಳು. ಆಕೆಗೆ ಕೆಟ್ಟ ಕನಸು ಬಿದ್ದಿತ್ತು.
ನಾರಾಯಣನಿಗೂ ಎಚ್ಚರವಾಯಿತು.
"ಕಾಮೂ, ಕಾಮೂ, ಏನೇ ಅದು?"
ಬೆವತು ಹೋಗಿತ್ತು ಆಕೆಯ ಮೈ. ಗಂಟಲು ಆರಿತ್ತು.
"ನಾರಾಯಣಿ ಕಾಹಿಲೆ ಮಲಗಿದ್ದ ಕನಸು ಬಿತ್ತು."
"ಅಷ್ಟೇ ತಾನೆ? ಹಗಲೆಲ್ಲಾ ಅದೇ ಯೋಚ್ನೇ ಮಾಡ್ತಾ ಇದ್ದೆಯೋ
ಏನೋ....."
"ಚಂಪಾವತಿಗೆ ಹೆರಿಗೆ ನೋವು ಅಲ್ವೆ?"
"ಹೌದು. ನಾಳೆ ಬೆಳಿಗ್ಗೆ ಪುತ್ಥಳಿಯಂಥ ಒಂದು ಹೊಸ ಮಗು ವಠಾರಕ್ಕೆ ಬರುತ್ತೆ."
ಕಾಮಾಕ್ಷಿ ಗಂಡನ ಸಮೀಪಕ್ಕೆ ಸರಿದಳು. ಏನನ್ನೂ ಮಾತನಾಡಲಿಲ್ಲ.
"ಅವರಾದ್ಮೇಲೆ ನಿನ್ನ ಸರದಿ ಕಾಮೂ..."
...ರಾತ್ರಿ ಕಳೆದು ಬೆಳಗಾಯಿತು. ಹೆರಿಗೆಯಾಗಿರಲಿಲ್ಲ
ವಠಾರದವರು ದಿನನಿತ್ಯದ ಕೆಲಸ ಕಾರ್ಯಗಳನ್ನೆಲ್ಲ ಮರೆತಂತೆ ವರ್ತಿಸಿದರು.
ಚಂದ್ರಶೇಖರಯ್ಯ ಲೇಡಿ ಡಾಕ್ಟರೊಬ್ಬರನ್ನು ಕರೆತಂದ.
ಹೆಂಗಸರು ಹೆಬ್ಬಾಗಿಲಿನಾಚೆ ಹೊರ ಅಂಗಳದಲ್ಲಿ ಗುಂಪು ಕಟ್ಟಿ ನಿಂತು ಗುಸು
ಗುಸು ಮಾತನಾಡಿದರು.
ರಂಗಮ್ಮ ಹಲ್ಲು ಕಡಿಯುತ್ತ, ಗಂಟಲಿನಿಂದ ಸ್ವರ ಹೊರಡಿಸುತ್ತಾ, ಏದುಸಿರು
ಬಿಟ್ಟುಕೊಂಡು, ನಡೆಗೋಲಿನಿಂದ ಟಕ್ ಟಕ್ ಸದ್ದು ಮಾಡುತ್ತ, ಅತ್ತಿತ್ತಾ ಬೆನ್ನು
ಬಾಗಿಸಿ ನಡೆದರು.
ಬಹಿರಂಗವಾಗಿ ಅವರೇನನ್ನೂ ಹೇಳಲಿಲ್ಲವಾದರೂ ಅವರ ಅಂತರ್ಯದ ಧ್ವನಿ
ನುಡಿಯುತ್ತಿತ್ತು:
"ಅದೇ ಮನೆಯಲ್ಲಿ ಹೆರಿಗೆಗೆ ತಾನು ಬಿಡಬಾರದಾಗಿತ್ತು.ಆಸ್ಪತ್ರೆಗೇ ಕಳಿಸ್ಬೇ
ಕಾಗಿತ್ತು."