ಪುಟ:Rangammana Vathara.pdf/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

189

ಬೇಡ ಬೇಡವೆಂದರೂ, ಒಂದು ವರ್ಷದ ಹಿಂದೆ ನಾರಾಯಣಿ ಆ ಮನೆಯಲ್ಲಿ
ಸುಮಾರು ಅದೇ ಹೊತ್ತಿಗೆ ಪ್ರಾಣಸಂಕಟದಿಂದ ನರಳುತ್ತಿದ್ದ ನೆನಪು ಅವರನ್ನು ಕಾಡಿತು.
ಮೀನಾಕ್ಷಮ್ಮ ತನ್ನ ಮನೆಯ ಬಾಗಿಲಲ್ಲೆ, ಕೊನೆಯ ಮನೆಗೆ ಸಮೀಪವಾಗಿಯೆ,
ನಿಂತಳು.
ರಂಗಮ್ಮ ಕೊಳಾಯಿಯ ಬೀಗ ತೆಗೆದರು. ಆದರೆ ವಠಾರದವರು ಬಿಂದಿಗೆ-
ಬಕೀಟು-ತಟ್ಟೆಗಳ ಸಾಲನ್ನು ಕಟ್ಟಿರಲಿಲ್ಲ.
ವಠಾರದ ಜೀವನ ಅಸ್ತವ್ಯಸ್ತವಾಗಿತ್ತು.
ಚಂಪಾವತಿಯ ನರಳಾಟ ಹೆಚ್ಚಿದಂತೆ ಹೆಂಗಸರೆಲ್ಲಾ ಓಣಿಗೇ ಬಂದಿಳಿದರು.
ನರಳಾಟ ನಿಂತಿತು.'ಸುಖಪ್ರಸವ'ವಾಗಿತ್ತು ಚಂಪಾವತಿಗೆ.
ಆವರೆಗೂ ಮಗಳೊಡನೆ ಅಡುಗೆ ಮನೆಯಲ್ಲಿ ನಿಂತಿದ್ದ ಶಂಕರನಾರಾಯಣಯ್ಯ
ನಿಗೆ ದಾದಿ ಸುದ್ದಿ ಮುಟ್ಟಿಸಿದಳು.
ಆತ ಎಲ್ಲಾ ಆಯಾಸವನ್ನೂ ಮರೆತು ಮುಖವರಳಿಸಿಕೊಂಡು ಡಾಕ್ಟರರ ಅನು
ಮತಿ ಪಡೆದು ಮನೆಯಿಂದ ಹೊರಬಂದ.
ಆತನ ಮುಖ ನೋಡುತ್ತಲೆ ಎಲ್ಲರಿಗೂ ಸಮಾಧಾನವಾಯಿತು.
ರಂಗಮ್ಮ ಮನಸ್ಸಿನಲ್ಲೆ ಅಂದುಕೊಂಡರು:
"ಗಂಡು ಮಗೂಂತ ತೋರುತ್ತೆ. ಅದಕ್ಕೇ ಇಷ್ಟು ಖುಶಿಯಾಗಿದಾನೆ."
ಮಗು ಎಂತಹದೆಂದು ಕೇಳುವ ಕುತೂಹಲ ಎಲ್ಲರಿಗೂ ಇತ್ತು. ಆದರೆ
ತಮ್ಮೆಲ್ಲರಿಗಿಂತಲೂ ಹಿರಿಯರಾದ ರಂಗಮ್ಮ ಅಲ್ಲಿ ನಿಂತಿದ್ದಾಗ ಬೇರೆ ಹೆಂಗಸರು
ಕೇಳುವ ಹಾಗಿರಲಿಲ್ಲ.
ಏನನ್ನೂ ಹೇಳದೆ ಆ ಗಂಡಸು ಹಾಗೆಯೇ ನಿಂತಿದ್ದುದನ್ನು ಕಂಡು ರಂಗಮ್ಮ
ನಿಗೆ ರೇಗಿತು. ಆದರೆ ಅದನ್ನು ಅವರು ಹೊರಗೆ ತೋರ್ಪಡಿಸಲಿಲ್ಲ. ಪ್ರಕಾಶವಾಗಿ
ನಗುತ್ತಲೇ ಅವರು ಹೇಳಿದರು:
"ಎಂಥದಪ್ಪಾ ಮಗು? ರಾಜಕುಮಾರ ತಾನೇ?"
ಶಂಕರನಾರಾಯಣಯ್ಯ ನಗುತ್ತ ಹೇಳಿದ:
"ಇಲ್ಲ ರಂಗಮ್ನೋರೆ. ಸೌಭಾಗ್ಯಲಕ್ಷ್ಮಿ!"
ಆ ಹೆಂಗಸರೆಲ್ಲ ಒಂದು ಕ್ಷಣ ನಿರಾಶೆಯಾದಂತೆ ತೋರಿತು. ಆದರೆ ಆ ಗಂಡ
ಸಿನ ಉತ್ಸಾಹ ಕಂಡು ಭ್ರಮೆಗೊಂಡು, ಸುಖಪ್ರಸವದ ಸುವಾರ್ತೆಯನ್ನು ಸ್ವಾಗತಿಸಿ,
ಅವರೆಲ್ಲ ಮುಗುಳ್ನಕ್ಕರು. ಅವರಿಗನಿಸಿತು: ಈತ ವಿಚಿತ್ರ ಮನುಷ್ಯ. ಅಳುಮೋರೆ
ಹಾಕಿ 'ಹೆಣ್ಣು' ಅನ್ನೋ ಬದಲು, ನಗುನಗುತ್ತ 'ಸೌಭಾಗ್ಯಲಕ್ಷ್ಮಿ',ಅನ್ನೋದೆ?
ಗಂಭೀರ ಧ್ವನಿಯಲ್ಲಿ ವಠಾರದ ಒಡತಿ ರಂಗಮ್ಮನೆಂದರು:
"ಸೌಭಾಗ್ಯಲಕ್ಷ್ಮಿಯೇ ಸರಿ. ಹೆಣ್ಣು ಯಾವುದರಲ್ಲೂ ಗಂಡಸಿಗೆ ಕಮ್ಮಿ ಇಲ್ಲ.
ಸಂತೋಷ-ಸಂತೋಷ!"