ಪುಟ:Rangammana Vathara.pdf/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

191

ಗಳನ್ನು ಪ್ರಚೋದಿಸುವಂತಾಗಬೇಕು ಅನ್ನೋದು ನನ್ನ ಅಪೇಕ್ಷೆ."
"ಇಲ್ಲಿ ನೀವು ಚಿತ್ರಿಸಿರೋದು ಬ್ರಾಹ್ಮಣರ ವಠಾರ."
"ಹೌದು."
"ನೀವು ಬ್ರಾಹ್ಮಣರೆ?"
"..........."
"ಬ್ರಾಹ್ಮಣೇತರರೇ?"

"..........."
"ಯಾಕೆ ಮುಗುಳ್ನಗ್ತಿದ್ದೀರಿ?"
"ನಾನು ಮನುಷ್ಯ. ಮಾನವನಾಗಿ ಇಲ್ಲಿ ಬದುಕನ್ನು ನೋಡಿದ್ದೇನೆ."
"ಸಂತೋಷ. ನೀವು ಹೀಗೆ ಉತ್ತರ ಕೊಡ್ತೀರಿ ಅಂತ ನಿರೀಕ್ಷಿಸಿಯೇ ಇದ್ದೆ!"
"ಈ ಕಾದಂಬರಿಯಲ್ಲಿ ಚಿತ್ರಿತವಾಗಿರುವ ಸಮಾಜ ಎಂಥದು? ಸುತ್ತಮುತ್ತಲೂ
ಔದ್ಯೋಗಿಕ ಬೆಳವಣಿಗೆಯಾಗ್ತಲೇ ಇದ್ದು, ಪಾಳೆಯಗಾರ ಆಚಾರ ವಿಚಾರಗಳ ಮೇಲೆ
ಒಂದೇ ಸಮನೆ ಆಘಾತವಾಗ್ತಿದೆ. ಇಲ್ಲಿ ಹೆಚ್ಚಿನ ಜನ ಬದಲಾವಣೆಯನ್ನು ಸ್ವಾಗತಿ
ಸದೆ ಇದ್ದರೂ ಅನಿವಾರ್ಯವೆಂದು ಒಪ್ಪಿಕೊಳ್ಳೋದನ್ನು ಕಾಣ್ತೇವೆ. ಹೊಸ ಹಳೆಯ
ಮನೋವೃತ್ತಿಗಳ ನಡುವೆ ವಠಾರ ಜೀವನದಲ್ಲಿ ತಾಕಲಾಟಗಳಾಗೋದನ್ನು ಕಾಣ್ತಲೇ
ಇರ್ತೇವೆ. "
"ಆದರೆ ಬೇರೆ ರೀತಿಯ ವಠಾರಗಳೂ ಇವೆ, ಅಲ್ಲವೇ?"
"ಇವೆ. ಔದ್ಯೋಗಿಕ ವ್ಯವಸ್ಥೆಯ ಒತ್ತಡಕ್ಕೆ ಸಿಲುಕಿ, ಹಿಂದಿನ ಜೀವನ ಕ್ರಮ
ಎಷ್ಟೋ ಕಡೆ ಬಿರುಕು ಬಿಟ್ಟಿದೆ. ಈಗೀಗ ವಿವಿಧ ಜಾತಿ ಕೋಮುಗಳ ಜನ ಒಂದೇ
ಕಡೆ ವಾಸವಾಗಿರುವ ವಠಾರಗಳೂ ಕಾಣಸಿಗ್ತವೆ. ಕನ್ನಡ ನಾಡಿನ ದೊಡ್ಡ ದೊಡ್ಡ
ನಗರಗಳಲ್ಲಿ ಅಕ್ಕಪಕ್ಕದ ಮನೆಯವರು ಯಾರೂಂತ ನಿವಾಸಿಗಳಿಗೆ ತಿಳೀದೇ ಇರೋ
ದುಂಟು. ಆದರೆ ಅದನ್ನು ತಿಳಕೊಳ್ಳೋದಕ್ಕೆ ಬಿಡುವಾಗಲೀ ಅಪೇಕ್ಷೆಯಾಗಲೀ
ಇರದ ವಠಾರ ಜೀವನವನ್ನು ಮುಂಬಯಿಯಂಥ ಶಹರಗಳಲ್ಲಿ ಕಾಣ್ತೇವೆ. ಅಲ್ಲಿ
ರೂಪುಗೊಂಡಿರುವ ಹಣದ, ದುಡಿಮೆಯ, ಸಮಾಜ ವ್ಯವಸ್ಥೆಯೊಳಗೆ ಜಾತಿ ಮತಗಳ
ಕಟ್ಟುಪಾಡು ಆಶ್ಚರ್ಯವೆನಿಸುವ ರೀತಿಯಲ್ಲಿ ಸಡಿಲವಾಗಿದೆ, ಅದು 'ಚಾಳ್' ಜೀವನ.
ನಮ್ಮ ನಾಡಿನ ವಠಾರ ಜೀವನಕ್ಕಿಂತ ಭಿನ್ನವಾದದ್ದು."
"ನಮ್ಮಲ್ಲಿ ಈಗಿರುವ ವಠಾರ ಜೀವನವೂ ಕ್ರಮೇಣ ಬದಲಾಗ್ತದೇಂತ ನಿಮ್ಮ
ಅಭಿಪ್ರಾಯವಲ್ವೆ?"
"ಹೌದು. ಖಂಡಿತವಾಗಿಯೂ. ಪ್ರತಿ ದಿನವೂ ಅದು ಬದಲಾಗ್ತಲೇ ಇದೆ.
ಮಾರ್ಪಾಟು ಹೊಂದುತಿರೋ ನಮ್ಮ ಬದುಕಿನ ವ್ಯವಸ್ಥೆ ವಠಾರ ಜೀವನದಲ್ಲೂ
ಸ್ವಾಭಾವಿಕವಾಗಿಯೇ ಪ್ರತಿಬಿಂಬಿತವಾಗ್ತಿದೆ.
"ನಿಮ್ಮ ಪಾತ್ರಗಳು__"