ಪುಟ:Rangammana Vathara.pdf/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

192

ಸೇತುವೆ

"ಏನು? ಹೇಳಿ."
"ಪುಸ್ತಕವನ್ನೋದಿದ ಪ್ರತಿಯೊಬ್ಬರೂ ಹೆಚ್ಚಿನ ಪಾತ್ರಗಳನ್ನೆಲ್ಲ ಸುತ್ತು
ಮುತ್ತಲೂ ಗುರುತಿಸಬಹುದು."
"ಹಾಗಾಯಿತೆಂದರೆ ನಾನು ಧನ್ಯ. ಸಾಹಿತ್ಯಕೃತಿ ಜೀವಂತ ವ್ಯಕ್ತಿಗಳ ಛಾಯ
ಗ್ರಹಣವಲ್ಲ; ಅವರ ನಡೆನುಡಿಗಳ ವರದಿಯಲ್ಲ. ಆದರೆ ಸೂಕ್ಷ್ಮ ನಿರೀಕ್ಷಣೆಯ
ಸಾಮರ್ಥ್ಯವುಳ್ಳ ಬರೆಹಗಾರ ಬದುಕಿನಲ್ಲಿ ಕಾಣುವ ವಿಧವಿಧದ ವ್ಯಕ್ತಿಗಳಿಂದ ಸಮಾನ
ಗುಣಗಳನ್ನು ಆಯ್ದುಕೊಳ್ಳಬೇಕು. ಪ್ರತಿಯೊಂದು ಪಾತ್ರದ ಸೃಷ್ಟಿಯ ಹಿಂದೆಯೂ
ಅಂಥದೇ ಗುಣಗಳುಳ್ಳ ಎಷ್ಟೋ ವ್ಯಕ್ತಿಗಳ ಸ್ವಭಾವ ನಿರೀಕ್ಷಣೆಯ ಮೊತ್ತವಿರಬೇಕು.
ಅಂಥ ಮೊತ್ತವೇ ಕಲಾವಿದನಾದ ಬರೆಹಗಾರನಿಗೆ ದೊರೆಯೋ ಆವೆಮಣ್ಣು. ಅದನ್ನು
ಹದಗೊಳಿಸಿದ ಬಳಿಕ, ಬರೆಹಗಾರ ಶಿಲ್ಪಿಯ ಕೌಶಲ ಪ್ರತಿಭೆಗಳಿಗೆ ಅನುಗುಣವಾಗಿ
ಕೃತಿ ಸಿದ್ಧವಾಗ್ತದೆ. ವಾಸ್ತವವಾದದಂಥ ಒಳ್ಳೆಯ ಪ್ರವೃತ್ತಿ ಅಪೇಕ್ಷಿಸೋದು
ಅದನ್ನು."
"ನಿಮ್ಮ 'ರಂಗಮ್ಮನ ವಠಾರ' ಆ ಸಿದ್ಧಾಂತಕ್ಕೆ ಅನುಗುಣವಾಗಿಯೇ ಇದೆ
ಅಂತೀರಾ?"
"ಪ್ರಯತ್ನವನ್ನಂತೂ ಮಾಡಿದ್ದೇನೆ."
"ನಮ್ಮ ಆಧುನಿಕ ಸಾಹಿತ್ಯದಲ್ಲಿ ಕಾಣುವ ವಾಸ್ತವವಾದದ ಪ್ರವೃತ್ತಿ ಪಾಶ್ಚಾತ್ಯ
ಸಾಹಿತ್ಯದ ಪ್ರಭಾವದ ಫಲವಾಗಿ ಹುಟ್ಟಿತು, ಅಲ್ಲವೆ?"
"ಆರಂಭದಲ್ಲಿ ಹಾಗಾಯಿತು ಎನ್ನದಿರಲಾರೆ. ವಿದೇಶೀಯರ ಆಳ್ವಿಕೆಗೆ ಒಳ
ಗಾದ ನಾವು ಅವರ ಸಾಹಿತ್ಯದಿಂದ ಪ್ರಭಾವಿತರಾಗುವುದು ಅನಿವಾರ್ಯವಾಗಿತ್ತು...
ಆಧುನಿಕ ಕನ್ನಡ ಸಾಹಿತ್ಯದ ಮೊತ್ತ ಮೊದಲಿನ ಲಲಿತ ಕೃತಿಗಳೇ ವಾಸ್ತವವಾದದ
ಬಾವುಟವನ್ನು ಹಾರಿಸಿದುವು ಅನ್ನೋದು ಅಭಿಮಾನದ ಸಂಗತಿ. ೧೮೮೭ನೆಯ ಇಸವಿ
ಯಲ್ಲಿ ಪ್ರಕಟವಾದ ಕನ್ನಡದ ಪ್ರಪ್ರಥಮ ಏಕಾಂಕ ನಾಟಕ 'ಇಗ್ಗಪ್ಪ ಹೆಗಡೆಯ
ವಿವಾಹ ಪ್ರಹಸನ' ಮತ್ತು ೧೮೯೯ರಲ್ಲಿ ಪ್ರಕಟವಾದ ಪ್ರಪ್ರಥಮ ಕಾದಂಬರಿ
'ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯವು'__ ಇವು ಎರಡೂ ವಾಸ್ತವವಾದದ
ಹೆದ್ದಾರಿಯನ್ನು ಹಾಕಿಕೊಟ್ಟುವೂಂತ ಧಾರಾಳವಾಗಿ ಹೇಳಬಹುದು."
"ಜೀವನವನ್ನು ಸಾಹಿತ್ಯ ನಿರೂಪಿಸಬೇಕು ಅಲ್ವೆ?"
"ಜೀವನವನ್ನು ಸಾಹಿತ್ಯ ನಿರೂಪಿಸಲೂ ಬೇಕೂ, ರೂಪಿಸಲೂ ಬೇಕು."
"ಆದರೆ ಬದುಕಿನ ಯಥಾರ್ಥ ಚಿತ್ರಣವೊಂದರಿಂದಲೇ ಎರಡೂ ಕೆಲಸಗಳು
ಆಗಲಾರವು. ನಿಜವೆ?"
"ಸರಿ ಹೇಳಿದಿರಿ. ಯಾವುದೋ ದೇಶದ ಯಾವುದೋ ಕಾಲದ ಸಾಹಿತ್ಯವನ್ನು
ಉದಾಹರಿಸಿ ವಾಸ್ತವವಾದವನ್ನು ಒರಟು ನಿಸರ್ಗವಾದವಾಗಿ ವಿವರಿಸುವವರಿದ್ದಾರೆ.
ಅದು ಸರಿಯಲ್ಲ. ಸಮಾಜದ ಹಿತೇಚ್ಛುವಾದ, ನಾಳೆಯ ನವ್ಯತೆಯನ್ನು ಗುರುತಿಸ