ಪುಟ:Rangammana Vathara.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

18

ಸೇತುವೆ

ಯೊಂದೊಂದೂ ತೆರೆದ ಬಾಗಿಲುಗಳೆಡೆಯಿಂದ ಕಾಣಿಸುತ್ತಿತ್ತು.
ರಂಗಮ್ಮನ ಗಂಟಲಿನಿಂದ ಆಂ_ಊಂ_ನರಳಾಟದ ಧ್ವನಿ ಹೊರಟಿತು. ಹಲ್ಲು
ಕಡಿತದ ಸಪ್ಪಳ ಕೇಳಿಸಿತು. ಎಲ್ಲಿಲ್ಲದ ಬೇಸರದಿಂದ ಹಿಂಡಿಹೋಗಿತ್ತು ಮನಸ್ಸು.
ಓಣಿಯಲ್ಲಿ ಪದ್ಮನಾಭನ ಮನೆಯ ಮುಂದುಗಡೆ ಯಾವುದೋ ಮಗು ಇಸ್ಸಿ
ಮಾಡಿತ್ತು.
ಕಟಕಟನೆ ಸದ್ದು ಮಾಡಿಕೊಂಡು ಹಾಸುಗಲ್ಲುಗಳ ಮೇಲೆ ನಡೆಯುತ್ತ ರಂಗಮ್ಮ
ಅಲ್ಲಿಗೆ ಬಂದರು.
"ಯಾರ ಮಗೂನೇ ಇದು?........ವಠಾರದ ಆಚೆಗೆ ಬೀದಿಗೆ ಕಳಿಸೀಂತ ಎಷ್ಟು
ಸಾರಿ ಹೇಳಿಲ್ಲ ನಿಮಗೆ?...."
ಯಾವ ಮನೆಯಿಂದಲೂ ಉತ್ತರ ಹೊರಡಲಿಲ್ಲ. ರಂಗಮ್ಮನ ಸ್ವರ ಕಿರಿಚಿ
ಕೊಳ್ಳುವ ಮಟ್ಟಕ್ಕೇರಿತು:
"ಕಿವಿ ಕೇಳಿಸೋಲ್ವೇನ್ರೇ? ಪದ್ಮಾವತೀ, ಕಮಲಮ್ಮ, ಯಾರ ಮಗೂನ್ರೇ
ಇದು?"
"ನಮ್ಮದಲ್ಲಪ್ಪ", " ನಮ್ಮದಲ್ಲ" ಎಂದು ಉತ್ತರಗಳು ಬಂದುವು. ತಾಯಂದಿರು
ತಮ್ಮ ಎಳೆಯ ಮಕ್ಕಳನ್ನು ಹಿಡಿದು ತಿರುಗಿಸಿ ಪರೀಕ್ಷಿಸಬೇಕಾಯಿತು.
"ಇದೊಳ್ಳೇ ತಮಾಷಿ. ಹಾಗಾದರೆ ಬೀದಿ ಮಕ್ಕಳು ಬಂದುವೇನು ಇಲ್ಲಿಗೆ?"
ಎಂದು ಗಟ್ಟಿಯಾದ ಸ್ವರದಲ್ಲಿ ರಂಗಮ್ಮ ಕೇಳಿದರು.
ನಾರಾಯಣಿಯ ಮಗ ಪುಟ್ಟು ಹೊರ ಬಂದು ವಿಷಾದದ ಧ್ವನಿಯಲ್ಲಿ ಹೇಳಿದ:
"ನಮ್ಮನೇ ಮಗು ಅಜ್ಜಿ, ನಾನು ನೋಡೇ ಇರ್ಲಿಲ್ಲ. ತೆಗೀತೀನಿ."
ತಾಯಿಯಿಲ್ಲದ ತಬ್ಬಲಿ ಮಕ್ಕಳು...ರಂಗಮ್ಮನ ಗಂಟಲು ಒಣಗಿತು.
ಇಸ್ಸಿ ಎತ್ತಲು ಹುಡುಗ ಯಾವುದೋ ಹಳೆಯ ಪತ್ರಿಕೆಯ ಚೂರುಗಳನ್ನು
ತರುತ್ತಿದ್ದಂತೆ ಕಮಲಮ್ಮನ ಸ್ವರ ಕೇಳಿಸಿತು.
"ತಾಳೋ ಮರಿ. ನಾನು ತೆಗೀತೀನಿ, ತಾಳೋ...."
ರಂಗಮ್ಮ ಹಾಗೆಯೇ ಮುಂದಕ್ಕೆ ನಡೆಯುತ್ತ ಹಿತ್ತಿಲ ಬಾಗಿಲವರೆಗೆ ಬಂದರು.
ಆ ಕೊನೆಯ ಸಂಸಾರಕ್ಕೊದಗಿದ ದುರ್ಗತಿಯನ್ನು ನೆನೆಯುತ್ತ ಅವರಿಗೆ ಸಂಕಟವೆನಿಸಿತು,
ಉಗುಳು ನುಂಗುವಂತಾಯಿತು.
ಹಿತ್ತಿಲ ಬಾಗಿಲ ಬಳಿ ಕಸದ ಗುಪ್ಪೆ ಇತ್ತು. ಮೀನಾಕ್ಷಮ್ಮನ ಮನೆಯದೇ
ಎಂಬುದು ಖಚಿತವಾಗಿದ್ದರೂ ರಂಗಮ್ಮ ಎಂದಿನಂತೆ ಮಾತನಾಡಿದರು:
"ಯಾರ್ರೇ ಇಲ್ಲಿ ಕಸದ ಗುಪ್ಪೆ ಹಾಕಿರೋರು? ಬಾಗಿಲು ತೆರೆದು ಹೊರಕ್ಕೆ
ಎಸಿಯೋಕೆ ಆಗಲ್ವೇನ್ರೆ? ಮುನ್ಸಿಪಾಲ್ಟಿಯೋರು ವಠಾರದ ಒಳಕ್ಕೆ ಬರ್ತಾರೇಂತ
ತಿಳ್ಕೊಂಡಿದೀರೇನ್ರೇ?...."

ಮೀನಾಕ್ಷಮ್ಮ ಎಂದಿನಂತೆ ಸಾವಧಾನವಾಗಿಯೇ ಉತ್ತರವಿತ್ತಳು: