ಪುಟ:Rangammana Vathara.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

20

ಸೇತುವೆ

ಪುಣ್ಯಾತ್ಮ ಬಿಟ್ಟು ಹೋದ ಆಸ್ತಿಯೆಂದರೆ ಬಾಲ್ಯಾವಸ್ಥೆಯಲ್ಲಿದ್ದ ಒಂದು ಗಂಡು,
ಎರಡು ಹೆಣ್ಣು ಮತ್ತು ಪುಟ್ಟ ಮನೆ. ಅವರು ತೀರಿಕೊಂಡಾಗ ಮಹಡಿ ಕಟ್ಟುವ
ಕೆಲಸ ಅರ್ಧದಲ್ಲೇ ನಿಂತಿತ್ತು. ಆವರೆಗೂ ಪುಕ್ಕಲು ಜೀವಿಯಾಗಿ ಗಂಡನ ನೆರಳಾಗಿದ್ದ
ರಂಗಮ್ಮ ಆ ಬಳಿಕ ಧೈರ್ಯ ತಳೆದು ದಿನ ಕಳೆದರು.
ಮನೆಯ ಅರ್ಧವನ್ನು ಅವರು ಬಾಡಿಗೆಗೆ ಕೊಟ್ಟರು. ಮಹಡಿ ಕಟ್ಟುವ ಕೆಲಸ
ಪೂರ್ತಿಯಾಯಿತು. ಕ್ರಮೇಣ ಕೆಳ ಭಾಗದಲ್ಲಿ ನಾಲ್ಕು ಮನೆಗಳಾದುವು. ಮಹಡಿಯ
ಮೂರು ಕೊಠಡಿಗಳನ್ನು ಓದುವ ಹುಡುಗರಿಗೆ ಬಾಡಿಗೆಗೆ ಕೊಟ್ಟುದಾಯಿತು.
ಬೆಳೆದು ನಿಂತ ಎರಡು ಹುಡುಗಿಯರನ್ನೂ ಹೆಚ್ಚು ಖರ್ಚಿಲ್ಲದೆಯೇ ರಂಗಮ್ಮ
ಮದುವೆ ಮಾಡಿಕೊಟ್ಟರು. ಆದರೆ ಮಗನಿಗೆ ಮಾತ್ರ ತುಂಬ ಅನುಕೂಲವಾಗಿದ್ದ
ಕಡೆಯೇ ಸಂಬಂಧ ಕುದುರಿಸಿದರು.ವರದಕ್ಷಿಣೆಯಾಗಿ ಬಂದುದನ್ನೆಲ್ಲ ಬಳಸಿ, ಮನೆಯ
ಹಿಂಭಾಗದ ಹಿತ್ತಿಲಲ್ಲಿ ಎರಡು ಸಾಲು ನಾಲ್ಕು-ನಾಲ್ಕು ಮನೆಗಳನ್ನು ಕಟ್ಟಿಸಿದ್ದಾಯಿತು.
ಜನ ಅದನ್ನು ವಠಾರವೆಂದು ಕರೆದರು. ಹಾಗೆ ಕರೆಯಲು ಯಾರು ಮೊದಲು
ಮಾಡಿದರೊ! ರಂಗಮ್ಮ ವಿಧವೆಯಾದ ಮೇಲೂ ಬಹಳ ಕಾಲ ಕೃಷ್ಣಪ್ಪನವರ ಮನೆ
ಯಾಗಿಯೇ ಇದ್ದುದು ಕ್ರಮೇಣ ರಂಗಮ್ಮನ ವಠಾರವಾಗಿ ಮಾರ್ಪಟ್ಟಿತು.
ಅದು ಹಲವು ವರ್ಷಗಳಿಗೆ ಹಿಂದಿನ ಮಾತು,ಈಗ ರಂಗಮ್ಮ ವೃದ್ಧೆ. ಇಬ್ಬರು
ಹೆಣ್ಣು ಮಕ್ಕಳಿಗೂ ಎಷ್ಟೋ ಮಕ್ಕಳಾಗಿದ್ದುವು. ಮಗನೂ ಸಂಸಾರವಂದಿಗನಾಗಿ ತಂದೆ
ಯಾಗಿದ್ದ. ಆಗಾಗ್ಗೆ ವರ್ಗವಾಗುತ್ತಿದ್ದ ಆತ ಈಗ ಇದ್ದುದು ಕಡೂರಿನಲ್ಲಿ.
ಯಾರಾದರೂ ಕೇಳಿದರೆ ರಂಗಮ್ಮ ಹೇಳುತ್ತಿದ್ದರು:
"ಇಲ್ಲೇ ಕಡೂರಲ್ಲಿ. ಒಪ್ಪೊತ್ತಿನ ಪ್ರಯಾಣ... "
ತಾನು ಹೋದಲ್ಲಿಗೆ ತಾಯಿಯನ್ನೂ ಕರೆದೊಯ್ಯಬೇಕೆಂದು ಮಗ ಎಷ್ಟೋ
ಪ್ರಯತ್ನಿಸಿದ್ದ.

"ತಿಂಗಳಿಗೊಂದ್ಸಾರಿ ಬಾಡಿಗೆ ವಸೂಲ್ಮಾಡ್ಕೊಂಡು ಬಂದರಾಯ್ತು," ಎಂದಿದ್ದ.
ರಂಗಮ್ಮ ಒಪ್ಪಿರಲಿಲ್ಲ. ತಮ್ಮ ಆ ವಠಾರವನ್ನು ಬಿಟ್ಟು ಒಂದು ದಿನದ ಮಟ್ಟಿಗೂ
ದೂರಹೋಗಲು ಅವರು ಸಿದ್ಧವಿರಲಿಲ್ಲ.
ಅವರು ಸೂಚಿಸಿದ್ದೊಂದೇ ಪರಿಹಾರ:
"ಆದಷ್ಟು ಬೇಗ್ನೆ ಈ ಊರ್ಗೇ ವರ್ಗ ಮಾಡಿಸ್ಕೊಂಡ್ಬಿಡಪ್ಪ...."
ವಠಾರದ ಮೇಲ್ವಿಚಾರಣೆಯೇನು ಸುಲಭದ ಕೆಲಸವೆ? ಹುಡುಗರಿಗೆ ಏನೂ
ತಿಳಿಯದು. ಏನೂ ತಿಳಿಯದು...
ಒಂಟಿಯಾಗಿಯೇ ಇರುವುದು ರಂಗಮ್ಮನಿಗೆ ಅಭ್ಯಾಸವಾಯಿತು. ಒಮ್ಮೊಮ್ಮೆ
ಒಬ್ಬೊಬ್ಬ ಮಗಳು ಚಿಳ್ಳೆ ಪಿಳ್ಳೆಗಳೊಡನೆ ಅಲ್ಲಿಗೆ ಬರುವುದಿತ್ತು. ಆಗ ರಂಗಮ್ಮ
ವಠಾರದ ಮೇಲ್ವಿಚಾರಣೆಯ ಜತೆಗೆ ಮೊಮ್ಮಕ್ಕಳ ಲಾಲನೆ ಪಾಲನೆಯನ್ನು ಮಾಡುತ್ತ
ಸುಖಿಯಾಗುತ್ತಿದ್ದರು.