ಪುಟ:Rangammana Vathara.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

22

ಸೇತುವೆ

ಚಿಂತಿಸಿದರು.
ಕರ್ತವ್ಯ ಸ್ಪಷ್ಟವಾಗಿತ್ತು. ಅದು ಸಾರುತ್ತಿತ್ತು:
'ಮನೆ ಖಾಲಿ ಮಾಡಿಸಬೇಕು: ಬೇಗನೆ ಖಾಲಿ ಮಾಡಿಸಬೇಕು.'
ರಂಗಮ್ಮ ನಿಟ್ಟುಸಿರು ಬಿಟ್ಟು ಒಲೆ ಹಚ್ಚಿದರು.
ಕಕ್ಕಸಿಗೆ ಹೋದಾಗ ಅವರಿಗೆ ಕಾಣಿಸಿತು. ನಾರಾಯಣಿಯ ಗಂಡ ಒಲೆಯ
ಬುಡದಲ್ಲಿ ಕುಳಿತು ಮಕ್ಕಳಿಗೆ ಗಂಜಿ ಬಡಿಸುತ್ತಿದ್ದ. ಹೊರಗಿನಿಂದ ತೂರಿಬರುತ್ತಿದ್ದ
ಬಿಸಿಲನ್ನು ಸಹಿಸಲಾರದೆ ಕಣ್ಣು ಕಿರಿದುಗೊಳಿಸುತ್ತ ಹಣತೆ ಉರಿಯುತ್ತಿತ್ತು.
'ಈಗಲೇ ಹೇಳೋಣವೇ?'
"ಈಗಲೇ ಹೇಳೋಣವೇ?" ಎಂದು ರಂಗಮ್ಮ ತಮ್ಮನ್ನೇ ಪ್ರಶ್ನಿಸಿದರು.
"ಬೇಡ . ಮಧ್ಯಾಹ್ನ ಹೇಳಿದರಾಯ್ತು. ಇಲ್ಲವೆ ಸಂಜೆ ಹೇಳಿದರಾಯ್ತು"
ಎಂದು ತಮಗೆ ತಾವೇ ಉತ್ತರಿಸಿಕೊಂಡರು.
...ಆದರೆ ಮಧ್ಯಾಹ್ನ ಆತ ಮನೆಯಲ್ಲೇ ಇರಲಿಲ್ಲ. ಸಂಜೆಯಾದರೂ ಬರಲಿಲ್ಲ.
ಮಾಡಬೇಕಾದ್ದೇನೆಂಬುದು ಇತ್ಯರ್ಥವಾಗಿದ್ದರೂ ಆ ಕೆಲಸವನ್ನಷ್ಟು ಬೇಗನೆ
ಮುಗಿಸುವುದಾಗಲಿಲ್ಲವಲ್ಲ ಎಂದು ರಂಗಮ್ಮನಿಗೆ ಕಸಿವಿಸಿಯಾಯಿತು. ದುಗುಡ ಹೆಚ್ಚಿತು.
ನಿಷ್ಕಾರಣವಾಗಿ ರೇಗುತ್ತ, ಏನಾದರೊಂದು ನೆಪ ತೆಗೆದು ಯಾರಿಗಾದರೂ ಛೀಮಾರಿ
ಹಾಕುತ್ತ, ವಠಾರದ ಉದ್ದಗಲಕ್ಕೂ ಅವರು ಓಡಾಡಿದರು.
ಕತ್ತಲಾಗುತ್ತ ಬಂದಾಗ ರಂಗಮ್ಮ ಚಿಕ್ಕವರನ್ನು ಆಡಿಸುತ್ತ ನಿಂತಿದ್ದ ನಾರಾ
ಯಣಿಯ ದೊಡ್ಡ ಹುಡುಗನನ್ನು ಕರೆದರು.
"ಎಲ್ಹೋಗಿದಾನೋ ನಿಮ್ಮಪ್ಪ?"
"ಗೊತ್ತಿಲ್ಲ ಅಜ್ಜಿ."
"ಬರ್ತಾನೇನು ರಾತ್ರೆ?"
"ಹೂಂ. ಬರ್ತಾರೆ."
ಆ ಬಳಿಕ ಅಸ್ಪಷ್ಟವಾದ ನಾಲ್ಕು ಮಾತುಗಳನ್ನು ರಂಗಮ್ಮ ಗೊಣಗಿದರು. ಅದೇ
ನೆಂದು ತಿಳಿದುಕೊಳ್ಳುವ ಗೊಡವೆಗೂ ಆತ ಹೋಗಲಿಲ್ಲ.
ಹುಡುಗ ತಾಯಿಯಿಲ್ಲದ ತನ್ನ ಮನೆಯತ್ತ ಹೊರಟ. ಆಗ ರಂಗಮ್ಮ
ಮತ್ತೊಮ್ಮೆ ಆತನ ಹೆಸರು ಹಿಡಿದು ಕರೆದರು.

"ನಿಮ್ಮಪ್ಪ ಬಂದ ತಕ್ಷಣ ನನ್ನನ್ನ ನೋಡ್ಬೇಕೂಂತ ಹೇಳು."
" ಹೂನಜ್ಜಿ."
ತನ್ನ ತಂದೆಯನ್ನು ಯಾಕೆ ಕರೆದಿರಬಹುದೆಂದು ಆ ಹುಡುಗ ಯೋಚಿಸಲಿಲ್ಲ.
ರಂಗಮ್ಮ ತಮ್ಮ ಮನೆಯಲ್ಲಿ 'ದೀಪ ಹಾಕಿ'ದರು. ಕಮಲಮ್ಮ ಬಂದು ನಾರಾಯಣಿಯ
ಮನೆಯಲ್ಲೂ ಗುಂಡಿಯೊತ್ತಿದಳು. ಪಾತ್ರೆಯಲ್ಲಿ ಬೆಳಗ್ಗೆ ಮಾಡಿ ಉಳಿದಿದ್ದ
ಗಂಜಿಯಿತ್ತು.