ಪುಟ:Rangammana Vathara.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

25

"ಮೂರು ತಿಂಗಳ ಬಾಡಿಗೆ ನಿಂತು ಹೋಗಿದೆ."
"ಕೆಲಸ ಸಿಕ್ಕಿದ ತಕ್ಷಣ ಕೊಟ್ಬಿಡ್ತೀನಿ ರಂಗಮ್ನೋರೆ. "
ಹಾಗೆ ಹೇಳಿದ್ದ ಮಹಾನುಭಾವರನ್ನು ಹಿಂದೆಯೂ ಕಂಡಿದ್ದರು ರಂಗಮ್ಮ. ಆ
ಮಾತಿಗೆ ಬೆಲೆ ಎಷ್ಟೆಂಬುದೂ ಅವರಿಗೆ ಗೊತ್ತಿತ್ತು.
" ಹುಡುಗರ ಹಾಗೆ ಆಡ್ತೀಯಪ್ಪಾ ನೀನು," ಎಂದು ಸ್ವರವನ್ನು ಸ್ವಲ್ಪ ತೀಕ್ಷ್ಣ
ಗೊಳಿಸಿ ರಂಗಮ್ಮ ಹೇಳಿದರು.
ನಾರಾಯಣಿಯ ಗಂಡ ತಲೆ ತಗ್ಗಿಸಿದ. ಈತನಿನ್ನು ಅಳುವುದಕ್ಕೆ ಆರಂಭಿಸ
ಬಹುದೆಂದು ರಂಗಮ್ಮನಿಗೆ ತೋರಿತು. ಮೌನವಾಗಿ ಅವರು ಒಂದು ಕ್ಷಣ ಕಳೆದರು.
ಸದ್ಯಃ ಆತ ಅಳಲಿಲ್ಲ. ಬೇರೆ ಬಿಡಾರ ಇನ್ನೆಲ್ಲಿ ಹುಡುಕಬೇಕು ಎಂಬ ಯೋಚನೆಯಲ್ಲಿ
ಅವನು ಮುಳುಗಿದ್ದ.
ಗಂಭೀರ ಧ್ವನಿಯಲ್ಲಿ ರಂಗಮ್ಮನೆಂದರು:
"ನನಗೆ ಗೊತ್ತಿದೆಯಪ್ಪಾ. ಈ ಮೂರು ತಿಂಗಳ ಬಾಡಿಗೆ ಐವತ್ತೊಂದು
ರೂಪಾಯಿ ಕೊಡೋದು ನಿನ್ನಿಂದಾಗೋಲ್ಲ. ಮುಂದೆಯೂ ಪ್ರತಿ ತಿಂಗಳು ಹದಿನೇಳು
ರೂಪಾಯಿ ಕೊಡೋದೂ ನಿನ್ನಿಂದಾಗೋಲ್ಲ."
ಪ್ರತಿಕ್ರಿಯೆ ಏನು ಎಂದು ಆತನ ಮುಖಭಾವದಿಂದ ತಿಳಿಯಲು ರಂಗಮ್ಮ
ಪ್ರಯತ್ನಿಸಿದರು. ಆದರೆ ಆತನ ತಲೆಗೂದಲಿನ ನೆರಳು ಮುಖದ ಮೇಲೆ ಬಿದ್ದು,
ಏನೂ ಕಾಣಿಸಲಿಲ್ಲ.
"ನೋಡಪ್ಪಾ, ನಾನು ತೀರ್ಮಾನ ಮಾಡ್ಬಿಟ್ಟಿದ್ದೀನಿ."
ಈಗಲೂ ಆತ ತಲೆ ಎತ್ತಲಿಲ್ಲ. ಆ ತೀರ್ಮಾನ ಏನೆಂದು ತಿಳಿಯುವ ಕುತೂ
ಹಲವೂ ಅವನಿಗಿದ್ದಂತೆ ತೋರಲಿಲ್ಲ.
"ಬಾಕಿಯಾಗಿರೋ ಐವತ್ತೊಂದು ರೂಪಾಯಿ ಅನುಕೂಲವಾದಾಗ ಕೊಡು.
ನಾಳೆಯ ದಿವಸ ಮನೆ ಖಾಲಿ ಮಾಡು."
ಈಗ ಆತ ತಲೆ ಎತ್ತಿದ. ಅಸಹಾಯಕತೆ ಮಂಜಿನ ಪರದೆಯಾಗಿ ಕಣ್ಣ ಬೊಂಬೆ
ಗಳನ್ನು ಮುಚ್ಚಿಕೊಂಡಿತ್ತು. ಆ ಮನುಷ್ಯನಿಗೆ ತುಟಿಗಳೇ ಇಲ್ಲವೆನೋ ಎಂಬಂತೆ
ಮುಖ ಮುದುಡಿತ್ತು. ಆತ ಮೂಕನಾಗಿಯೇ ಇದ್ದ.
ಇದೊಳ್ಳೇ ಪ್ರಾರಬ್ಧ ಎಂದುಕೊಂಡರು ರಂಗಮ್ಮ.
ಆದರೆ ಅಷ್ಟರಲ್ಲೇ, ಅಸಹನೀಯವಾಗಿದ್ದ ಮನವನ್ನು ಮುರಿದು ಗಂಟಲು
ಸರಿಪಡಿಸುತ್ತ ಆತ ಮಾತನಾಡಿದ:
"ಇನ್ನೊಂದು ತೊಂಗಳಾದರೂ ಪುರಸೊತ್ತು ಕೊಡಿ ರಂಗಮ್ನೋರೆ."
ಅದೀಗ ನಿಷ್ಠುರವಾಗಿ ಮಾತನಾಡಬೇಕಾದ ಸಂದರ್ಭ.
" ಇಲ್ಲ " ಎಂದರು ರಂಗಮ್ಮ. ಸ್ವಲ್ಪ ತಡೆದು ಅವರು ಮುಂದುವರಿದರು:
"ಸಾಧ್ಯವೇ ಇಲ್ಲ, ಮನೆ ಖಾಲಿ ಮಾಡ್ಲೇಬೇಕು."4