ಪುಟ:Rangammana Vathara.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೧

ಬಾಡಿಗೆಗೆ ಇದ್ದ ಮನೆಯನ್ನು ನೋಡಲು ಇಬ್ಬರು ಮೂವರು ಬಂದರು. ವರ್ಷ
ವರ್ಷಗಳಿಂದ ನುಡಿದು ನುರಿತಿದ್ದ ಸ್ವರದಲ್ಲಿ ರಂಗಮ್ಮ ಹೇಳಿದರು: "ಕೊಳಾಯಿ ಇದೆ,
ಲೈಟಿದೆ, ಬಚ್ಚಲಿದೆ, ಕಕ್ಕಸಿದೆ." ಸಮಾಧಾನದ ಛಾಯೆಯನ್ನು ಆ ಮುಖಗಳ ಮೇಲೆ
ಕಾಣದೆ ಇದ್ದಾಗ ರಂಗಮ್ಮ ಕೊನೆಯ ಯತ್ನ ಮಾಡಿದರು: "ಬಾಡಿಗೆ ಇಪ್ಪತ್ತೇ
ರೂಪಾಯಿ. ಬೇಕಾದರೆ ನಿಮಗಾಗಿ ಒಂದು ರೂಪಾಯಿ ಕಮ್ಮಿ ಮಾಡ್ತೀನಿ."
-"ನಾಳೆ ಬಂದು ಹೇಳ್ತೀನಿ."
-"ಮನೆಯವರನ್ನ ವಿಚಾರಿಸಿ ತಿಳಿಸ್ತೀನಿ."
-"ಹತ್ತೊಂಭತ್ತು ರೂಪಾಯಿಯೇ ಅಖೈರು ಹಾಗಾದರೆ?"
-"ಅಂತೂ ನಾನು ಬಂದು ಹೇಳೋವರೆಗೂ ದಯವಿಟ್ಟು ಯಾರಿಗೂ
ಕೊಡ್ಬೇಡಿ."
ಆದರೆ ಪರಿಣಾಮ ಒಂದೇ. ಒಮ್ಮೆ ನೋಡಿ ಹೋದವರು ಮತ್ತೆ ಬರಲಿಲ್ಲ.
ರಂಗಮ್ಮ ತಮ್ಮೊಳಗೇ ಗೊಣಗಿದರು. ನಾರಾಯಣಿಯ ಗಂಡನನ್ನು
ಹನ್ನೊಂದು ದಿನ ಕಳೆಯುವುದಕ್ಕೆ ಮುಂಚೆ ಕಳಿಸಬಾರದಿತ್ತೆಂಬ ಅಂಶ ಬೇರೆ ಅವರ
ಮನಸ್ಸನ್ನು ಆಗಾಗ್ಗೆ ಕುಟುಕುತ್ತಿತ್ತು. ಬಿಡಾರ ಖಾಲಿಯಾಗಿಯೇ ಉಳಿದಷ್ಟು ದಿನವೂ
ಹೆಚ್ಚುತ್ತಿತ್ತು ಆ ಯೋಚನೆ.
ಮನೆಯನ್ನು ಹತ್ತೊಂಭತ್ತು ರೂಪಾಯಿ ಬಾಡಿಗೆಗೆ ಕೊಡಬೇಕೆಂಬುದು ಅವರ
ನಿರ್ಧಾರವಾಗಿತ್ತು. ಹಾಗೆ ಬಾಡಿಗೆ ಹೆಚ್ಚಿಸುವುದು ಈ ಕೆಲವು ವರ್ಷಗಳಿಂದ ಅವರು
ಅನುಸರಿಸುತ್ತ ಬಂದಿದ್ದ ಪದ್ಧತಿ. ಮೊದಲಿನಲ್ಲಿ ಆ ಮನೆಗಳಿಗೆಲ್ಲ ಅವರಿಗೆ ದೊರೆಯು
ತ್ತಿದ್ದುದು ಐದೈದು ರೂಪಾಯಿ ಬಾಡಿಗೆ. ಆಗ ವಿದ್ಯುದ್ದೀಪವಿರಲಿಲ್ಲ. ಅದು ಬಂದ
ಮೇಲೆ ಬಾಡಿಗೆ ಏಳು ರೂಪಾಯಿಗೆ ಏರಿತು. ಯುದ್ಧದ ಸಮಯದಲ್ಲಿ ಬೇರೆ ಬೇರೆ
ಕಾರಣಗಳನ್ನು ಹೇಳಿ ಬಾಡಿಗೆ ಹನ್ನೆರಡೂವರೆ ಎಂದು ರಂಗಮ್ಮ ಗೊತ್ತು ಮಾಡಿದರು.
ಕೆಲವರು ಅಷ್ಟನ್ನು ತೆರಲಾಗದೆ ಹೊರಟು ಹೋಗಬೇಕಾಯಿತು. ಆಗ ಹೊಸತಾಗಿ
ಬಂದವರಿಂದ ಪಡೆದುದು ಹದಿನಾಲ್ಕು ರೂಪಾಯಿ. ಆನಂತರ ಹದಿನೈದು_ಹೀಗೆ.
ವಠಾರಕ್ಕೆ ಅತ್ಯಂತ ಹಳಬಾರದ ಸುಬ್ಬುಕೃಷ್ಣಯ್ಯನ ಸಂಸಾರ ಈಗಲೂ ಕೊಡುತ್ತಿ
ದ್ದುದು ಹನ್ನೆರಡೂವರೆ ರೂಪಾಯಿ ಬಾಡಿಗೆಯೇ. ಆದರೆ ಹೊಸಬರಾದ ನಾರಾಯಣ-
ಕಾಮಾಕ್ಷಿಯರ ಮನೆಬಾಡಿಗೆ ಹತ್ತೊಂಭತ್ತು. ಹಾಗೆ ತರತಮವೆಣಿಸುವುದರಲ್ಲಿ ತಪ್ಪಿಲ್ಲ
ವೆಂಬುದು ರಂಗಮ್ಮನ ದೃಡ ಅಭಿಪ್ರಾಯ. ಅವರ ದೃಷ್ಟಿಯಲ್ಲಿ ಮನೆಗೆ ತಕ್ಕಂತೆ
ಬಾಡಿಗೆಯಲ್ಲ. ಬಾಡಿಗೆ ಅವರವರ ಅನುಕೂಲತೆಗೆ ತಕ್ಕಂತೆ, ಸಂಪಾದನೆಗೆ ಅನುಗುಣ
ವಾಗಿ. ಇಂಥವರು ತಮ್ಮ ವಠಾರಕ್ಕೆ ಬಿಡಾರ ಬರುವರೆಂಬುದು ಖಚಿತವಾದಾಗ ಅವರ
ಪೂರ್ವೇತಿಹಾಸವನ್ನೂ ಈಗಿನ ಇರುವಿಕೆಯನ್ನೂ ಕೂಲಂಕಷವಾಗಿ ರಂಗಮ್ಮ ಕೇಳಿ