ಪುಟ:Rangammana Vathara.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

33

ರಂಗಮ್ಮ ಬಂದವನೊಡನೆ ಕೊನೆಯ ಮನೆಯ ಒಳಹೊಕ್ಕಿದ್ದನ್ನು ಕಂಡು,
ಅಹಲ್ಯಾ ಹೇಳಿದಳು:
“ಈಗ ರಂಗಮ್ಮ ಏನು ಹೇಳ್ತಾರೆ ಗೊತ್ತೇನು?"
"ಗೊತ್ತು, ಗೊತ್ತು."
"ಕೊಳಾಯಿ ಇದೆ, ಲೈಟಿದೆ, ಬಚ್ಚಲಿದೆ, ಕಕ್ಕಸಿದೆ..."
ಹೇಳುತ್ತ ಹೇಳುತ್ತ ಅಹಲ್ಯಾ ನಕ್ಕಳು, ಕಾಮಾಕ್ಷಿಗೂ ನಗು ತಡೆಯಲಾಗಲಿಲ್ಲ.
ಇವರ ಸಂಭಾಷಣೆ ಕೇಳಿ ಪಕ್ಕದ ಮನೆಯೊಳಗಿದ್ದ ಕಮಲಮ್ಮನಿಗೂ ನಗು ಬರದಿರಲಿಲ್ಲ.
ಸರಿಯಾಗಿಯೇ ಹೇಳಿದ್ದಳು ಅಹಲ್ಯಾ.ರಂಗಮ್ಮ ಎತ್ತಿಕೊಳ್ಳುತ್ತ ಆ
ಮಾತನ್ನೇ ಆಡಿದರು.
ಆದರೆ ಬಂದವನು ಸ್ವಲ್ಪ ವಿಚಿತ್ರವಾಗಿದ್ದ.
"ಕೊಳಾಯಿ ಆಗ್ಲೇ ನೋಡ್ದೆ. ಬರುತ್ಲೆ ಎದುರುಗಡೇನೇ ಇದೆ, ಅಲ್ವೆ?"
ಬಂದವನ ಆ ಮಾತಿಗೆ ಏನು ಉತ್ತರ ಕೊಡಬೇಕೆಂಬುದು ರಂಗಮ್ಮನಿಗೆ
ತೋಚದೆ ಹೋಯಿತು. ಆದರು ಆವರು ಸುಧಾರಿಸಿಕೊಂಡರು.
"ಹೌದು ಅದೇ. ಪ್ರತಿ ಮನೆಗೂ ಮೂರು ಮೂರು ಬಿಂದಿಗೆ ನೀರು, ಜಾಸ್ತಿ
ಬೇಕಾದರೆ ಮೂರು ಮೂರು ಬಿಂದಿಗೆಗೆ--"
ಬಂದವನು ನಡುವೆ ಬಾಯಿಹಾಕಿದ:
"ಅಯ್ಯೋ ಅದು ಪರವಾಗಿಲ್ಲಾಂದ್ರೆ. ಏನೋ ಇಷ್ಟು ಚಿಲ್ಲರೆ ದುಡು. ಅಷ್ಟೇ
ತಾನೇ?"
ರಂಗಮ್ಮ ಒಂದು ಕ್ಷಣ ತೆಪ್ಪಗಾಗಿ ಹೂಂಗುಟ್ಟಿದರು.
ಆತ ಛಾವಣಿಯನ್ನು ದಿಟ್ಟಿಸುತ್ತ ವಿದ್ಯುತ್ ಗುಂಡಿಯನ್ನು ಒತ್ತಿ ನೋಡಿದ.
"ಮೇನ್ ಸ್ವಿಚ್ಚು ಆಫ್ ಮಾಡಿದೀರೇನೋ?"
"ಹೂಂ. ಚಿಕ್ಕ ಹುಡುಗರು. ಅಪಾಯ ಅಂತ."
"ಸರಿ, ಸರಿ, ನ್ಯಾಯವೇ."
ಆತನ ಮುಖದ ಮೇಲೆ ಯಾವ ಭಾವವಿದೆಯೆಂದು ತಿಳಿಯಲು ರಂಗಮ್ಮ
ದಿಟ್ಟಿಸಿ ನೋಡಿದರು. ನಿಶ್ಚಲವಾಗಿತ್ತು ಮುಖಮುದ್ರೆ, 'ಆಸಾಮಿ ಜೋರಾಗಿ
ದಾನೆ' ಎನಿಸಿತು ರಂಗಮ್ಮನಿಗೆ. ಯಾಕೋ ಅವರಿಗೆ ಅಧೈರ್ಯವಾಯಿತು.
ಮನೆಯಿಂದ ಹೊರಕ್ಕೆ ಕಾಲಿಡುತ್ತ ಆತ ಹೇಳಿದ:
"ಚಪ್ಪಲಿ ಹೊರಗೇ ಬಿಟ್ಟು ಬಂದೆ. ಪರವಾಗಿಲ್ಲ ತಾನೆ?"
"ನಮ್ಮ ವಠಾರದಲ್ಲಿ ನಾಯಿ ಇಲ್ಲ," ಎಂದು ಹೇಳಿ ರಂಗಮ್ಮ ಸುಮ್ಮನಾದರು.
ಆತ, ಒಣಿಯಲ್ಲಿ ತುಂಬಿದ್ದ ಹುಡುಗರ ತಂಡವನ್ನು ಮತ್ತೊಮ್ಮೆ ನೋಡಿ,
ಕೇಳಿದ:
"ಬಚ್ಚಲು ಮನೆ ಎಲ್ಲಿದೆ?"