ಪುಟ:Rangammana Vathara.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

34

ಸೇತುವೆ

ಅಲ್ಲೆ ಪಕ್ಕದಲ್ಲೆ ಹಿತ್ತಿಲ ಗೋಡೆಗೆ ಅಂಟಿಕೊಂಡಿದ್ದ ಮುರುಕು ಕೊಠಡಿಯನ್ನು
ರಂಗಮ್ಮ ತೋರಿಸಿದರು. ಮಗನ ಮದುವೆಯ ಬಳಿಕ ಸಾಲುಮನೆಗಳನ್ನು ಕಟ್ಟಿಸಿ
ದಾಗ ಮೊದಲೇನೋ ಬಚ್ಚಲುಮನೆಯಲ್ಲಿ ಹಂಡೆ ಹುಗಿಸಿದ್ದರು. ಆದರೆ ಆಮೇಲೆ
ದಿನನಿತ್ಯವೂ ನಡೆಯತ್ತಿದ್ದ ವಿವಾದಗಳನ್ನು ಬಗೆಹರಿಸಲಾಗದೆ, ಹಂಡೆಯನ್ನು
ಅಗೆದು, ತೆಗೆದು ಒಳಕ್ಕೆ ಒಯ್ದಿದ್ದರು.
ಬಚ್ಚಲು ಮನೆಯ ಆ ಸ್ಥಿತಿಗೆ ವಿವರಣೆ ಎಂಬಂತೆ ರಂಗಮ್ಮ ಹೇಳಿದರು:
"ಎಲ್ಲರ ಅನುಕೂಲಕ್ಕಾಗಿ ಬಚ್ಚಲು ಮನೇನ ಹೀಗೇ ಬಿಟ್ಟಿದ್ದೇವೆ. ಯಾರು
ಬೇಕಾದರೂ ಉಪಯೋಗಿಸ್ಬಹುದು."
"ಅವರವರ ಮನೇಲಿ ನೀರು ಕಾಯಿಸಿ ಹೊತ್ಕೊಂಡು ಬರ್ಬೇಕು ಅಲ್ವೆ?"
"ಹೌದು. ಬೇಕಾದರೆ ಒಳಗೆ ಅಡುಗೆ ಮನೇಲಿ ಸ್ನಾನ ಮಾಡೋಕೂ
ಏರ್ಪಾಟಿದೆ. ಎಷ್ಟೋ ಜನ ಹಾಗೇ ಮಾಡ್ತಾರೆ.
"ನಿಜ, ನಿಜ. ಅದೇ ಅನುಕೂಲ."
ಬಚ್ಚಲು ಮನೆಯ ಎದುರಿಗೆ ತಿರುಗಿ ಆತ ಹೇಳಿದ:
"ಇದು ಕಕ್ಕಸೂಂತ ಕಾಣುತ್ತೆ."
"ಹೌದು. ಬೊಂಬಾಯಿ ಕಕ್ಕಸು. ಸಿಮೆಂಟು ಹಾಕಿದೆ."
ಆತನಿಗೆ ಆಶ್ಚರ್ಯವಾದಂತೆಯೂ ತೋರಲಿಲ್ಲ. ನಗಲೂ ಇಲ್ಲ ಆತ. ರಂಗಮ್ಮ
ನನ್ನೇ ನೋಡಿ ಮುಖ್ಯ ಪ್ರಶ್ನೆ ಕೇಳಿದ:
"ಬಾಡಿಗೆ ಎಷ್ಟು?"
"ನಡೀರಿ. ಒಳಗೆ ಹೋಗೋಣ."
ಪುನಃ ರಂಗಮ್ಮನೇ ಮುಂದಾದರು. ಹಗಲಲ್ಲೂ ಕತ್ತಲು ಕವಿದಿರುತ್ತಿದ್ದ
ಮನೆ. ಬಾಗಿಲ ಹೊರಗ ಕುಳಿತು ಓಣಿಯ ಬೆಳಕನ್ನು ಆತ ದಿಟ್ಟಿಸಿದ. ಹೆಂಗಸರೂ
ಹುಡುಗರೂ ಅತ್ತಿತ್ತ ಹಾದು ಹೋಗುತ್ತಿದ್ದರು. ತನ್ನನ್ನು ನೋಡುವುದಕೋಸ್ಕರ
ಅವರು ಹಾಗೆ ಮಾಡುತ್ತಿದ್ದರೆಂದು ಬಂದವನಿಗೆ ತಿಳಿಯದೆ ಇರಲಿಲ್ಲ.
ರಂಗಮ್ಮ ಗೋಡೆಗೊರಗಿ ಕುಳಿತು, ಹೇಳಿದರು:
"ಬಾಡಿಗೆ ಇಪ್ಪತ್ತು ರೂಪಾಯಿ."
"ಹೆಚ್ಚಾಯ್ತು ಅಲ್ವೆ?"
ರಂಗಮ್ಮ ಸುಮ್ಮನಿದ್ದರು. ಅವರು ಕೇಳಬೇಕಾಗಿದ್ದ ಬೇರೆ ಕೆಲವು ಪ್ರಶ್ನೆಗಳು
ಉಳಿದಿದ್ದುವು.
"ನೀವು ಯಾವ ಜನ?"
"ಬ್ರಾಹ್ಮಣ. ಯಾಕೆ, ಸಂಶಯ ಬಂತೆ?"
"ಹಾಗಲ್ಲ. ಬ್ರಾಹ್ಮಣರಲ್ದೋರು ಯಾರೂ ಮನೆ ವಿಚಾರಿಸ್ಕೊಂಡು ನಮ್ಮ
ವಠಾರಕ್ಕೆ ಬರೋದೇ ಇಲ್ಲ. ಬೇರೆ ಜನಕ್ಕೆ ನಾವು ಮನೆ ಕೊಡೋದೂ ಇಲ್ಲ."