ಪುಟ:Rangammana Vathara.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

37

'ಹೀಗೆ ಕೇಳ್ದೇಂತ ಏನೂ ತಿಳ್ಕೋಬೇಡಿಪ್ಪಾ' ಎಂದು ಹೇಳಲು ಮಗ ಕಲಿಸಿ
ಕೊಟ್ಟಿದ್ದ. ಮರೆಯದೇ ಈ ಸಲವೂ ಅದನ್ನು ರಂಗಮ್ಮ ಅಂದರು.
"ಸಂಬಳ ಇಲ್ಲ."
ರಂಗಮ್ಮನಿಗೆ ಆ ಉತ್ತರ ಅರ್ಥವಾಗಲಿಲ್ಲ.
"ಅಂದರೆ?"
"ಸಂಬಳ ಇಲ್ಲ-ಸಂಪಾದನೆ. ಸ್ವಂತದ ಸಂಪಾದನೆ. ಕೆಲಸ ಮಾಡಿದಷ್ಟೂ
ದುಡ್ಡು ಬರುತ್ತೆ."
"ತಿಂಗಳಿಗೆ ಒಂದರುವತ್ತು ರೂಪಾಯಿ ಬರುತ್ತೋ?"
"ನೂರು ನೂರೈವತ್ತು ರೂಪಾಯಿ ಬರುತ್ತೆ."
ರಂಗಮ್ಮ ಸುಮ್ಮನಾದರು. ಚಿತ್ರ ಬರೆದು ಅಷ್ಟು ಸಂಪಾದಿಸಬಹುದೆಂದು
ಅವರಿಗೆ ಗೊತ್ತಿರಲಿಲ್ಲ.ಸಂಪಾದನೆಯಲ್ಲೂ ಸ್ಥಾನಮಾನದಲ್ಲೂ ಚಂದ್ರಶೇಖರಯ್ಯ
ನನ್ನಾಗಲೀ ತಮ್ಮ ಮಗನನ್ನಾಗಲಿ ಮೀರಿಸುವವರು ಆ ವಠಾರಕ್ಕೆ ಬರಬಹುದೆಂದು
ಅವರು ಭಾವಿಸಿರಲಿಲ್ಲ. ಶಂಕರನಾರಾಯಣಯ್ಯನ ಬಗೆಗೆ ಗೌರವವೇನೂ ಅವರಲ್ಲಿ
ಉಂಟಾಗಲಿಲ್ಲ, ನಿಜ. ಆದರೆ, ಆ ಮನುಷ್ಯನಿಗೆ ಬಾಡಿಗೆ ಕೊಡುವ ಸಾಮರ್ಥ್ಯವಿದೆ
ಎಂದು ಅವರು ತಿಳಿದುಕೊಂಡರು.
"ಯಾವತ್ತು ಬರ್ತೀರಾ?"
"ಬಾಡಿಗೆ ವಿಷಯವೇ ಇತ್ಯರ್ಥವಾಗಿಲ್ವಲ್ಲಾ ಇನ್ನೂ ?"
"ಆಗ್ಲೇ ಹೇಳ್ಲಿಲ್ವೆ? ಇಪ್ಪತ್ತು ರೂಪಾಯಿ."
"ಎಲ್ಲಾದರೂ ಉಂಟೆ? ಏನಂದಾರು ಯಾರಾದರೂ?"
ರಂಗಮ್ಮನಿಗೆ ಸ್ವಲ್ಪ ರೇಗಿತು. ಅವರು ಬಿಗಿಯಾಗಿಯೇ ಅಂದರು:
"ನಿಮಗೆ ಇಷ್ಟವಾದರೆ ಬನ್ನಿ. ಕಷ್ಟವಾದರೆ ಬಿಡಿ. ಹತ್ತೊಂಭತ್ತು ರೂಪಾ
ಯಿಗಿಂತ ಕಮ್ಮಿ ಸಾಧ್ಯವೇ ಇಲ್ಲ."
"ಕಕ್ಕಸಿಗೆ ಬೇರೆ ಕೊಡ್ಬೇಕೇನು?"
ಮಾತಿನ ಜತೆ ಅಣಕದ ನಸುನಗೆಯಿತ್ತು. ಆದರೆ ರಂಗಮ್ಮನಿಗೆ ಅದು ಅರ್ಥ
ವಾಗಲಿಲ್ಲ.
"ಇಲ್ಲ. ನೀರಿಗೆ ಮಾತ್ರ___"
"ಸರಿ, ಸರಿ. ಅದನ್ನು ಆಗ್ಲೇ ಹೇಳಿದೀರಿ."
"ಇಷ್ಟೆ. ಒಪ್ಪಿಗೆಯಾದರೆ ಬನ್ನಿ. ನಿಮ್ಮ ಮನೆಯವರನ್ನ ಕರಕೊಂಡು ಬಂದು
ತೋರಿಸಿ, ಬೇಕಾದರೆ."
"ಅದೇನೂ ಪರವಾಗಿಲ್ಲ. ನಾನು ನೋಡಿದರೆ ಸಾಕು."
"ತಿಂಗಳ ಬಾಡಿಗೆ ಮುಂಗಡ ಕೊಡ್ಬೇಕು."

ಶಂಕರನಾರಾಯಣಯ್ಯ ಸ್ವಲ್ಪ ಹೊತ್ತು ಯೋಚಿಸಿ ಹೇಳಿದ: