ಪುಟ:Rangammana Vathara.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

45

"ಯಾವತ್ತು ಬರ್ತಾರಂತ್ರೀ?"
"ನಿನಗ್ಯಾಕೇ ಆ ಸಮಾಚಾರ? ಬರ್ತಾರೆ, ನಾಳೆ ಬಂದ್ಬಿಡ್ತಾರೆ."
ಎಷ್ಟು ಜನ? ದೊಡ್ಡವರೆಷ್ಟು-ಚಿಕ್ಕವರೆಷ್ಟು? ಕೆಲಸ ಏನು? ಅಹಲ್ಯೆಯ ಪ್ರಶ್ನೆ
ಗಳಿಗೆ ಅಂತ್ಯವಿರಲಿಲ್ಲ.
"ಸಾಕುಸಾಕಾಗಿ ಹೋಗುತ್ತಮ್ಮ ನಿನಗೆ ಉತ್ತರ ಕೊಟ್ಟು," ಎಂದು ರಂಗಮ್ಮ
ಬೇಸರದಿಂದಲೇ ಅಂದರು. ಆದರೆ ಕೇಳಿದ್ದಕ್ಕೆಲ್ಲ ಸಮರ್ಪಕ ಉತ್ತರ ಮಾತ್ರ ಕೊಡ
ದಿರಲಿಲ್ಲ.
"ತಿಂಗಳಿಗೆ ನೂರೈವತ್ತು ರೂಪಾಯಿ ಸಂಪಾದಿಸ್ತಾನೆ," ಎಂದು ಅಂತಹ ಬಾಡಿಗೆ
ದಾರನನ್ನು ದೊರಕಿಸಿಕೊಂಡ ತಮ್ಮ ಬಗೆಗೆ ಅಭಿಮಾನಪಡುತ್ತಾ ರಂಗಮ್ಮ ಹೇಳಿದರು.
ಅಹಲ್ಯಾ ಎದುರಲ್ಲೇ ಇದ್ದ ಕಾಮಾಕ್ಷಿಯ ಮನೆಗೆ ಜಿಗಿದಳು. ಅಲ್ಲಿಂದ ಹೊರ
ಹೋಗಿ "ಓ ರಾಧಾ, ಬಾರೇ" ಎಂದು ಮಹಡಿ ಮೇಲಿನ ಗೆಳತಿಯನ್ನು ಕೆಳಕ್ಕಿಳಿಸಿದಳು.
ಆ ಬಳಿಕ ಪ್ರತಿಯೊಂದೊಂದು ಮನೆಗೆ ಸುದ್ದಿ ಪ್ರಸಾರವಾಯಿತು.
_ನಾಳೆ ದಿವಸ ಕೊನೇ ಮನೆಗೆ ಬಿಡಾರ ಬರ್ತಾರಂತೆ.
_ಅವರು ಚಿತ್ರ ಬರೀತಾರಂತೆ.
ಉಪಾಧ್ಯಾಯರ ಹೆಂಡತಿಯ ಕುತೂಹಲ ಕೆರಳಿತು. ತಮ್ಮ ಸಂಸಾರದ್ದೊಂದು
ಭಾವಚಿತ್ರ ತೆಗೆಸಬೇಕೆಂದು ಆಕೆ ಬಹಳ ದಿನಗಳಿಂದ ಬಯಸಿದ್ದಳು. ಆ ಬಯಕೆ
ಈಡೇರಿಯೇ ಇರಲಿಲ್ಲ. ಗರ್ಭಿಣಿಯಾಗಿದ್ದಾಗ, 'ಈಗ ಚೆನ್ನಾಗಿರೋಲ್ಲ. ಬಾಣಂತಿ
ಯಾದ್ಮೇಲೆ ತೆಗೆಸೋಣ' ಎನ್ನುತ್ತಿದ್ದ ಗಂಡ ಲಕ್ಷೀನಾರಾಯಣಯ್ಯ. ಬಾಣಂತಿ
ಯಾದ ಮೇಲೆ, 'ಮಗು ಚಿಕ್ಕದು ಕಣೇ, ಅಲುಗುತ್ತೆ. ಚಿತ್ರ ಕೆಟ್ಟುಹೋಗುತ್ತೆ'
ಎನ್ನುತ್ತಿದ್ದ. ಮಗು ದೊಡ್ಡದಾಗುವುದರೊಳಗಾಗಿಯೇ 'ಈಗ ಚೆನ್ನಾಗಿರೋಲ್ಲ.
ಬಾಣಂತಿ ಯಾದ್ಮೇಲೆ__' ಬಾಣಂತಿಯಾದ ಮೇಲೆ ಹಿಂದಿನ ಕಥೆಯೇ. ಕ್ರಮೇಣ
ದಿನಕಳೆದಂತೆ ಭಾವಚಿತ್ರ ತೆಗೆಯುವ ವಿಷಯದಲ್ಲಿ ಉಪಾಧ್ಯಾಯರ ಆಸಕ್ತಿ ಕಡಮೆ
ಯಾಯಿತು. ಯಾವುದರಲ್ಲಿ ತಾನೆ ಆಸಕ್ತಿ ಇತ್ತು ಅವರಿಗೆ? ಮದುವೆಯಾದಾಗ ಒಂದು
ಭಾವಚಿತ್ರ ತೆಗೆಸಿತ್ತು_ಕುಳಿತ ಗಂಡನ ಹಿಂದೆ ನಿಂತು ತೆಗೆಸಿಕೊಂಡಿದ್ದ ಚಿತ್ರ. ಅವರ
ದುರದೃಷ್ಟ. ಕಟ್ಟು ಹಾಕಿಸಿದ್ದ ಚಿತ್ರದ ಗಾಜು ಒಡೆದುಹೋಯಿತು; ಚಿತ್ರದ ಹಿಂದಿದ
ರಟ್ಟಿಗೆ ಗೋಡೆಯ ಗೆದ್ದಲು ಹಿಡಿದು, ಚಿತ್ರದ ಕಾಲು ಭಾಗ_ಕಾಲುಗಳ ಭಾಗ_
ಅದಕ್ಕೆ ಆಹುತಿಯಾಯಿತು. ಮನೆಯೊಳಗೆ ಸಾಕಷ್ಟು ಬೆಳಕು ಇಲ್ಲದಿದ್ದುದರಿಂದ,
ಅಲ್ಲದೆ ಪರೀಕ್ಷಿಸಿ ನೋಡುವ ನೆಂಟರಿಷ್ಟರೂ ಬರುತ್ತಿರಲಿಲ್ಲವಾದ್ದರಿಂದ, ಅದೇ ಚಿತ್ರ
ವನ್ನು ಇನ್ನೂ ಗೋಡೆಯ ಮೇಲೆ ತೂಗಹಾಕಲು ಅಷ್ಟು ಸಂಕೋಚವೆನಿಸಿರಲಿಲ್ಲ.
ಆದರೂ ಹೊಸತೊಂದು ಭಾವಚಿತ್ರ ಇದ್ದಿದ್ದರೆ....
ಈಗ ಹೊಸ ಬಿಡಾರ ಬರಲಿರುವವರ ವಿಷಯ ಕೇಳುತ್ತ ಲಕ್ಷೀನಾರಾಯಣ
ಯ್ಯನ ಹೆಂಡತಿಯ ಆಸೆ ಮತ್ತೆ ಚಿಗುರಿತು.