ಪುಟ:Rangammana Vathara.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

47

ಬರವನ್ನು ಇದಿರು ನೋಡುತ್ತಿದ್ದರು. ಪ್ರತಿ ಸಲವೂ ಪ್ರತಿಯೊಂದು ಕರಾರು ಪತ್ರ
ವನ್ನೂ ಸುಬ್ಬಕೃಷ್ಣಯ್ಯನಿಗೆ ತೋರಿಸಿ, ಓದಿಸಿ ಕೇಳಿ, 'ಸರಿಯಾಗಿದೆ' ಎಂದು ಆತನ
ಒಪ್ಪಿಗೆ ಪಡೆದ ಹೊರತು ಅವರಿಗೆ ಸಮಾಧಾನವಿರುತ್ತಿರಲಿಲ್ಲ.
"ನಾಣೀ, ಏ ನಾಣೀ ..." ಎಂದು ಮೀನಾಕ್ಷಮ್ಮನ ಮಗನನ್ನು, ಓಣಿಯಲ್ಲಿ
ನಿಂತುಕೊಂಡು, ರಂಗಮ್ಮ ಕರೆದರು.
“ಊಟ ಮಾಡ್ತಾ ಇದಾನೆ ರಂಗಮ್ನೋರೆ," ಎಂದು ವಠಾರಕ್ಕೆಲ್ಲ ಕೇಳಿಸುವ
ಹಾಗೆ ಮೀನಾಕ್ಷಮ್ಮ ಉತ್ತರ ಕೊಟ್ಟಳು.
"ಇಲ್ಲಿ ಬಾಮ್ಮಾ ಸ್ವಲ್ಪ."
ಮೀನಾಕ್ಷಮ್ಮನನ್ನೇ ರಂಗಮ್ಮ ಕರೆದರು. ಆಕೆ ಹತ್ತಿರ ಬರುತ್ತಲೆ ಅವರೆಂದರು;
"ನಿನ್ನ ಯಜಮಾನರು ಮನೆಗೆ ಬಂದಿಲ್ಲ, ಅಲ್ವೆ?"
"ಇನ್ನು ಎಂಟುವರೇನೇ ಇಲ್ಲ."
"ಹೌದು ಹೌದು."
ಒಂಭತ್ತು ಘಂಟೆಗೆ ಶೆಟ್ಟರ ಅಂಗಡಿ ಬಾಗಿಲು ಹಾಕುತ್ತಿದ್ದರು. ಅನಂತರ
ಹೊರಟ ಸುಬ್ಬುಕೃಷ್ಣಯ್ಯ ಮನೆ ಸೇರುತ್ತಿದ್ದುದು ಒಂಭತ್ತೂವರೆಯ ಸುಮಾರಿಗೆ.
ಗಂಡ ಹೆಂಡಿರ ಊಟವೇ ದೀಪ ಆರುವುದಕ್ಕೆ ಮುಂಚೆ ಆ ಮನೆಯಲ್ಲಿ ನಡೆಯುತ್ತಿದ್ದ
ಕೊನೆಯ ಕೆಲಸ, ಊಟವಾದ ತಕ್ಷಣ ಅವರು ಮಲಗಿಬಿಡುತ್ತಿದ್ದರು...
ಏನು ವಿಶೇಷ-ಎಂದು ಕೇಳಬಹುದಾಗಿತ್ತು ಮೀನಾಕ್ಷಮ್ಮ, ಅದು ಗೊತ್ತೇ
ಇದ್ದುದರಿಂದ ಆಕೆ ಕೇಳಲಿಲ್ಲ. ತನ್ನ ಯಜಮಾನರ ವಿಷಯವಾಗಿ ರಂಗಮ್ಮ ತೋರು
ತ್ತಿದ್ದ ವಿಶ್ವಾಸದಿಂದ ಮೀನಾಕ್ಷಮ್ಮನಿಗೆ ಸಾಭಾವಿಕವಾಗಿಯೇ ಹೆಮ್ಮೆ.
ಒಳಗಿನಿಂದ ನಾಣಿಯ ಸ್ವರ ಕೇಳಿಸಿತು:
"ಅಮ್ಮಾ ಬಾ ಅಮ್ಮ."
"ಹೋಗಮ್ಮ, ನಿನ್ನ ಕುಮಾರ ಕಂಠೀರವ ಕೂಗ್ತಿದ್ದಾನೆ. ನಿನ್ನ ಯಜಮಾನರು
ಬಂದ್ಕೂಡ್ಲೆ ಸ್ವಲ್ಪ ಕಳಿಸ್ಕೊಡಮ್ಮ."
"ಹೂಂ" ಎಂದು ಮೀನಾಕ್ಷಮ್ಮ ಹೊರಟು ಹೋದಳು.
ರಂಗಮ್ಮ ಮಾರನೆಯ ದಿನ ಬೆಳಗ್ಗೆ ಮಾಡಬೇಕಾದ ಕೆಲಸದ ವಿಷಯವನ್ನು
ಯೋಚಿಸಿದರು. ಅರ್ಧ ಸೇರಿನಷ್ಟು ಸುಣ್ಣ ಯಾವುದೋ ಕಾಲದ್ದು ಮಿಕ್ಕಿತ್ತು
ಅದನ್ನೇ ಒಂದಿಷ್ಟು ಕಲಕಿ ನೀರು ಮಾಡಿದರಾಯಿತೆಂದುಕೊಂಡರು. ಹಿಂದೆ ಮಗ
ಮನೆಯಲ್ಲೇ ಇದ್ದಾಗ, ಮನೆಗಳು ತೆರವಾದಾಗಲೆಲ್ಲ ಎಷ್ಟೋ ಸಾರೆ ಆತನೇ ಗೋಡೆಗೆ
ಸುಣ್ಣ ಬಳಿಯುತ್ತಿದ್ದ. ಆ ಕೆಲಸವನ್ನೀಗ ರಂಗಮ್ಮ ಮಾಡುವಂತಿರಲಿಲ್ಲ, ಬೀದಿಯ
ಆಚೆಗಿನ ಎದುರು ಮನೆಗೆ ಮುಸುರೆ ತಿಕ್ಕಲು ಒಬ್ಬಾಕೆ ಬರುತ್ತಿದ್ದಳು. ಆಕೆಗೆ ಹೇಳಿ
ಕೆಲಸ ಒಪ್ಪಿಸಬೇಕು; ಒಂದು ನಾಲ್ಕಾಣೆ ಕೂಲಿ ಕೊಟ್ಟರಾಯ್ತು-ಎಂದು ಅವರು
ನಿರ್ಧರಿಸಿದರು.