ಪುಟ:Rangammana Vathara.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

48

ಸೇತುವೆ

ಹೇಗೆ ಹೊತ್ತು ಕಳೆಯಬೇಕೆಂದು ತೋಚದೆ ತಮ್ಮ ಬಾಗಿಲೆಳೆದುಕೊಂಡು
ರಂಗಮ್ಮ ಹೊರ ಅಂಗಳಕ್ಕೆ ಬಂದರು. ಮಹಡಿಯ ಮೇಲಿನ ಮೊದಲ ಕೊಠಡಿಯಲ್ಲಿ
ಓದುವ ಹುಡುಗರು ಅದೇನೋ ಮಾತನಾಡುತ್ತ ನಗುತ್ತ ಗದ್ದಲವೆಬ್ಬಿಸುತ್ತಿದ್ದರು.
ಪ್ರಯಾಸಪಟ್ಟು ಮಹಡಿಯ ಮೇಲೇರಿದರು ರಂಗಮ್ಮ. ಸದ್ದು ಮಾಡಬಾರ
ದೆಂದು ಅವರೆಷ್ಟು ಪ್ರಯತ್ನ ಪಟ್ಟರೂ ಉಸಿರಿಗಾಗಿ ಏದಾಟ, ಗಂಟಲಿನಿಂದ ಹೊರಡು
ತ್ತಿದ್ದ ನರಳಿಕೆಯ ಸ್ವರ, ಮಹಡಿ ಏರಿದ ಮೇಲೆ ನಡೆಗೋಲಿನ ಟಕ್ ಟಕ್ ಮುಂಚಿತ
ವಾಗಿಯೇ ಅವರ ಆಗಮನದ ಸಂದೇಶವನ್ನು ಹುಡುಗರಿಗೆ ಮುಟ್ಟಿಸಿದುವು. ಉಪಾ
ಧ್ಯಾಯರು ತರಗತಿಗೆ ಬಂದೊಡನೆ ಒಮ್ಮೆಲೆ ತಣ್ಣಗಾಗುವಂತೆ ಸದ್ದೆಲ್ಲ ಅಡಗಿ
ಹೋಯಿತು.
ಸುಧಾರಿಸಿಕೊಂಡು ಹೊರಗಿನಿಂದಲೇ ರಂಗಮ್ಮ ಹೇಳಿದರು:
"ಪರಮೇಶ್ವರಪ್ಪ, ಅದೇನೋ ಗಲಾಟೆ? ಮನಸ್ನಲ್ಲೇ ಓದ್ಕೋಬಾರ್ದೇನೊ..."
ಒಳಗಿನಿಂದ ಉತ್ತರ ಬರಲಿಲ್ಲ.
ಅದರ ಪಕ್ಕದ ಕೊಠಡಿಗೆ ಬೀಗ ಹಾಕಿತ್ತು.
ಮೂರನೆಯ ಕೊಠಡಿ ಮನೆಯ ಬಾಗಿಲಲ್ಲಿ ರಾಧೆಯ ತಾಯಿ ನಿಂತಿದ್ದಳು.
"ಊಟ ಆಯ್ತೇ?" ಎಂದು ರಂಗಮ್ಮ ಮುಂದೆ ಹೋಗುತ್ತಾ ಕೇಳಿದರು.
"ಹುಡುಗರು ಕೂತಿದಾರೆ."
ಉಣ್ಣಲು ಕುಳಿತಿದ್ದ ಜಯರಾಮು ತುತ್ತು ಅನ್ನವನ್ನು ಬಾಯಿಯಲ್ಲಿರಿಸಿ
ಕೊಂಡೇ ಕೇಳಿದ:
"ಕೊನೇ ಮನೆಗೆ ಯಾರೋ ಬಂದ್ರು, ಅಲ್ವೆ ರಂಗಮ್ನೋರೆ?"
"ಹೂನಪ್ಪಾ. ನಾಳೆ ಬರ್ತಾರೆ."
ಜಯರಾಮುವಿನ ತಾಯಿ ಕ್ಷೀಣ ಸ್ವರದಲ್ಲಿ ಹೇಳಿದಳು:
"ಕೆಳಗೆ ಮನೆ ಖಾಲಿಯಾದಾಗ ಕೊಡ್ತೀನೀಂತ ಹಿಂದೆ ಹೇಳಿದ್ರಿ."
"ಆದರೆ ನೀವು ಕೇಳ್ಲೇ ಇಲ್ಲ."
"ಅವರು ಇರ್ಲಿಲ್ಲಾಂತ__"
"ನಾನು ಅದಕ್ಕೇ ಸುಮ್ಮನಾದೆ."
ಆ ಪ್ರಸ್ತಾಪದಿಂದ ರಂಗಮ್ಮನ ಮನಸ್ಸಿನಲ್ಲಿ ಕಸಿವಿಸಿಯಾಯಿತು. ಅವರು
ಹಾಗೆ ಹೇಳಿದ್ದುದು ನಿಜ. ಆದರೆ ಈ ಮನೆಯವರು ಈಗ ಕೊಡುವುದು ಹದಿನಾರೇ
ರೂಪಾಯಿ. ಕೆಳಗೆ ಬಂದರೆ ಜಾಸ್ತಿ ಕೊಡಬೇಕು. ಅಲ್ಲದೆ, ಇವರು ಕೆಳಕ್ಕೆ ಬಂದ
ಮೇಲೆ ಮಹಡಿಯ ಮೇಲಿನ ಕೊಠಡಿ ಮನೆಗೆ ಸುಲಭವಾಗಿ ಬಾಡಿಗೆದಾರ ಸಿಗುವ
ಸಂಭವವೂ ಇರಲಿಲ್ಲ. ಇದೆಲ್ಲ ಮನಸ್ಸಿನ ಆಳದಲ್ಲಿ ಇದ್ದುದರಿಂದಲೇ ರಂಗಮ್ಮ ಆ
ಯೋಚನೆ ಮಾಡಿರಲಿಲ್ಲ.
ಬಾಗಿಲಲ್ಲಿ ನಿಂತಿದ್ದ ಆ ತಾಯಿ ಸುಮ್ಮನಿದ್ದುದನ್ನು ಕಂಡು, ಆ ಸಂದರ್ಭದಲ್ಲೇ