ಪುಟ:Rangammana Vathara.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

54

ಸೇತುವೆ

ರಂಗಮ್ಮನೂ ಅವನನ್ನು ಹಿಂಬಾಲಿಸಿಕೊಂಡು ಬಂದರು.
"ಗಾಡಿ ಬಂತು ಕಣೋ ಗುಂಡಣ್ಣ ."
ಯಾವ ಸಂದರ್ಭದಲ್ಲೂ 'ಸಹಾಯ ಮಾಡು' ಎಂದು ಬಾಯಿ ಬಿಚ್ಚಿ ಗುಂಡಣ್ಣ
ನಿಗೆ ಹೇಳಬೇಕಾದ್ದೇ ಇರಲಿಲ್ಲ.
ಮನೆಯ ಎದುರು ಭಾಗದ ಕಿಟಕಿಗಳಿಂದಲೂ ಮಹಡಿಯ ಮೇಲಿನಿಂದಲೂ
ವಠಾರದ ಸದಸ್ಯರ_ಹೆಂಗಸರು ಮಕ್ಕಳ_ಮುಖಗಳು ಕಾಣಿಸಿದುವು. ಹಿಂಭಾಗದಲ್ಲೂ
ಮನೆಯೊಡತಿಯರು ಬಾಗಿಲಿನಿಂದ ಹೊರಕ್ಕೆ ಕತ್ತು ಚಾಚಿ ಬೀದಿಯತ್ತ ನೋಡಿದರು.
ಕೆಲ ಹುಡುಗರು ಹುಲ್ಲು ಜಗಿಯುತ್ತ ನಿಂತಿದ್ದ ಎತ್ತಿನ ಬಳಿಯಲ್ಲೂ ಕೆಳಕ್ಕೆ ಇಳಿಸಿದ
ಸಾಮಾನುಗಳ ಸುತ್ತಲೂ ನಿಂತರು.
ಬೇರೆಯವರು ಮೊದಲು ಇದಿರ್ಗೊಂಡುದಾಯಿತೆಂದು ಸ್ಪಷ್ಟವಾದ ಮೇಲೆ
ರಂಗಮ್ಮ ತಲೆಯ ಮೇಲುಗಡೆ ಸೆರಗೆಳೆದು ಅಂಗಳಕ್ಕೆ ಇಳಿದರು.
"ಬಂದಿರಾ? ಬನ್ನೀಪ್ಪಾ..."
ಉಟ್ಟಿದ್ದುದು ಕಲಾಬತ್ತಿನ ಸೀರೆ_ಹಳೆಯದು. ತೊಟ್ಟಿದ್ದುದು ಚಿತ್ತಾರದ
ಅರಿವೆಯ ರವಕೆ_ಅಗಲವಾಗಿಯೇ ಇತ್ತು ಕತ್ತು. ನಡುವಿಗಿಂತ ನಾಲ್ಕೆಳೆ ಕೂದಲಷ್ಟು
ಎಡಕ್ಕೆ ಬೈತಲೆ ತೆಗೆದು ಜಡೆ ಹಾಕಿ ಆಕೆ ಹೆರಳು ಇಳಿಬಿಟ್ಟಿದ್ದಳು. ಎಡ ಕಂಕುಳಲ್ಲಿ,
ಬಣ್ಣ ಬಣ್ಣದ ಬಟ್ಟೆಯ ಲಂಗ ತೊಡಿಸಿದ್ದ ಪುಟ್ಟ ಹೆಣ್ಣುಮಗು. ಮೇಲು ತುಟಿ
ಯನ್ನು ಸ್ವಲ್ಪ ಕೊಂಕಿಸಿ, ತನಗೆ ಸ್ವಾಗತ ಬಯಸಿದವರನ್ನೆಲ್ಲ ನೋಡುತ್ತ ಅದು ಪಿಳಿ
ಪಿಳಿ ಕಣ್ಣು ಬಿಡುತ್ತಿತ್ತು...ವಠಾರದ ಹೆಂಗಸರೆಲ್ಲ ತಮ್ಮ ಜಾತಿಯ ಆ ಇನ್ನೊಬ್ಬಳನ್ನು
ನೋಡಿದರು.
ಆ ಸಾಮಾನುಗಳೋ? ಬಟ್ಟೆಬರೆಯನ್ನೆಲ್ಲ ಸುತ್ತಿ ದುಡ್ಡದಾಗಿ ಕಟ್ಟೀದ್ದ ಹಾಸಿಗೆ.
ಒಂದೆರಡು ಕಡೆ ನಜ್ಜುಗುಜ್ಜಾಗಿದ್ದ ಹಳೆಯದೊಂದು ಟ್ರಂಕು, ಪಾತ್ರೆ ಸರಂಜಾಮ
ಗಳನ್ನು ತುಂಬಿಕೊಂಡಿದ್ದೊಂದು ಗೋಣಿಚೀಲ. ದೇವರ ಪಟ. ಗಾಜು-ಪಿಂಗಾಣಿ
ಪಾತ್ರೆಗಳನ್ನು ಹೊತ್ತಿದ್ದ ತೊಟ್ಟಿಲು. ನಾಲ್ಕಾರು ಡಬ್ಬಗಳು, ಕಾಲು ಕಿತ್ತು ಜೋಡಿ
ಚಾಪೆಯಲ್ಲಿ ಸುತ್ತಿದ್ದ ಪೊರಕೆಗಳೆರಡು.
ರಂಗಮ್ಮನ ಮನಸ್ಸಿನಲ್ಲಿ ನೆನೆಪಿನ ಉಯ್ಯಾಲೆ ತೂಗುತ್ತಲೇ ಇತ್ತು. ಏಳು ವರ್ಷ
ಗಳ ಹಿಂದೆ ಒಂದು ಜಟಕಾ ಗಾಡಿಯಲ್ಲಿ ಬಂದಿದ್ದ ಒಂದು ಸಂಸಾರವನ್ನು ಈ ಸಂಸಾರ
ದೊಡನೆ ಹೋಲಿಸದೆ ಇರುವುದು ಸಾಧ್ಯವಿರಲ್ಲಿಲ್ಲ. ಆ ದಂಪತಿ ವಯಸ್ಸಿನಲ್ಲಿ ಇವರಿಗಿಂತ
ಸ್ವಲ್ಪ ಕಿರಿಯರು. ಆ ಹೆಂಗಸಿಗೆ ಬೆಡಗು ಬಿನ್ನಾಣವೇನೂ ಇರಲಿಲ್ಲ. ಆಕೆ ಸಂಕೋಚದ
ಮುದ್ದೆಯಾಗಿದ್ದಳು. ಕಂಕುಳಲ್ಲಿ ಒಂದು ವರ್ಷ ವಯಸ್ಸಿನ ಗಂಡು ಮಗುವಿತ್ತು.
ಸಾಮಾನುಗಳೂ ಇಷ್ಟಿರಲ್ಲಿಲ್ಲ. ಮುಖದ ಮೇಲಿನ್ನೂ ಮಗುತನವೇ ಇದ್ದಂತೆ ತೋರು
ತ್ತಿದ್ದ ಆ ಗಂಡ ಪ್ರತಿಯೊಂದು ಸಣ್ನ ಪುಟ್ಟ ವಿಷಯಕ್ಕೂ ಹೆಂಡತಿಯನ್ನೇ ಕೇಳು