ಪುಟ:Rangammana Vathara.pdf/೬೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
58
ಸೇತುವೆ
 

"ಬರೋಲ್ಲ."
"ಬಾರೇ ಇಲ್ಲಿ!"
"ಎದುರು ಮನೆ_ ಪಕ್ಕದ್ಮನೆಯವರಿಗೆ ಕೇಳ್ಸುತ್ತೆ."
ಶಂಕರನಾರಾಯಣಯ್ಯ ಉತ್ತರ ಕೊಡದೆ, ಮಗುವನ್ನೆತ್ತಿಕೊಂಡು ಮೂಲೆ
ಯಲ್ಲಿ ನಿಂತಿದ್ದ ಹೆಂಡತಿಯತ್ತ ನಡೆದ.
ಆ ಕ್ಷಣವೇ ಹೆಂಡತಿ ಗಟ್ಟಿಯಾಗಿ ಕೂಗಿ ಕರೆದಳು:
"ರಂಗಮ್ನೋರೆ!...."
ಮೀನಾಕ್ಷಮ್ಮ, ಪದ್ಮಾವತಿ, ಕಮಲಮ್ಮ, ಅಹಲ್ಯಾ, ಕಾಮಾಕ್ಷಿಯರೆಲ್ಲಾ
ತಮ್ಮ ತಮ್ಮ ಮನೆ ಬಾಗಿಲಿಗೆ ಬಂದರು. ಮಧುರವಾಗಿದ್ದರೂ ಗಟ್ಟಿಯಾಗಿದ್ದ ಹೊಸ
ಸ್ವರ. ಬಂದ ದಿನವೇ, ಬಂದ ಘಳಿಗೆಯಲ್ಲೇ. ಎಂತಹ ದಿಟ್ಟತನ!
ಶಂಕರನಾರಾಯಣಯ್ಯ "ಥೂ ನಿನ್ನ!" ಎಂದು ಅವಸರವಾಗಿ ಗೋಣಿ ಚೀಲ
ದತ್ತ ಸರಿದ. ಚಂಪಾ ಕುಲುಕುಲು ನಕ್ಕಳು.
ರಂಗಮ್ಮ ಬಂದೇಬಿಟ್ಟರು. ಹೊಸಬಳ ಧೈರ್ಯ ಅವರನ್ನೂ ಚಕಿತ
ಗೊಳಿಸಿತ್ತು.
"ಏನಮ್ಮಾ? ಕೂಗಿದ್ಯಾ?"
ಸುತ್ತು ಮುತ್ತು ಎಲ್ಲಿಂದಲೂ ಯಾವ ಸಪ್ಪಳವೂ ಇರಲಿಲ್ಲ. ವಠಾರದ ಆ ಭಾಗ
ವೆಲ್ಲಾ ಒಂದೇ ಕಿವಿಯಾಗಿ ಮಾರ್ಪಟ್ಟು ಹೊಸಬಳ ಉತ್ತರಕ್ಕಾಗಿ ಕಾದಿದ್ದಂತೆ ಕಂಡಿತು.
ರಂಗಮ್ಮ ಬರುವುದರೊಳಗೆ ನಗು ನಿಲ್ಲಿಸಿದ್ದ ಚಂಪಾ ಗಂಭೀರ ಮುಖಮುದ್ರೆ ತಳೆದಳು.
ಅಳುಕು ಸ್ವಲ್ಪವೂ ಆಕೆಯನ್ನು ಬಾಧಿಸಲಿಲ್ಲ.
"ಹೂಂ ಕಣ್ರೀ....ಒರಳು ಗುಂಡು ಇದೆಯೇಂತಾ?"
ಯಾವ ಸಂಕೋಚವೂ ಇಲ್ಲದೆ ಆ ಮಾತು ಬಂತು. ಆದರೆ ರಂಗಮ್ಮ ಅದನ್ನು
ನಿರೀಕ್ಷಿಸಿರಲಿಲ್ಲ.
"ಯಾಕೆ? ಇಲ್ಲಿಲ್ವೆ?"
"ನೋಡ್ದೆ. ಎಲ್ಲೂ ಕಾಣಿಸ್ಲಿಲ್ಲ,"
___ಎಂದಳು ಚಂಪಾ. ನಾಲ್ಕು ಹೆಜ್ಜೆ ಮುಂದೆ ಹೋಗಿ ಅಡುಗೆ ಮನೆಯೊಳಗೆ
ಹುಡುಕಿ ನೋಡುವ ಶಾಸ್ತ್ರವನ್ನೂ ಆಕೆ ಮಾಡಿದಳು.
ರಂಗಮ್ಮನಿಗೆ ಗಾಭರಿಯಾಯಿತು. ನಾರಾಯಣಿಯ ಗಂಡ ಎಲ್ಲಾದರೂ
ಗುಂಡುಕಲ್ಲನ್ನು ಒಯ್ದು ಬಿಟ್ಟನೇನೋ, ತನ್ನ ದೃಷ್ಟಿಗೆ ಈ ವರೆಗೂ ಆ ವಿಷಯ
ಗೋಚರವಾಗದೆ ಹೋಯಿತೇನೊ ಎಂದು ದಿಗಿಲಾಯಿತು. ಅವರ ದೃಷ್ಟಿ ಈಗ
ಮನೆ ತುಂಬ ಹರಡಿದ್ದ ಸಾಮಾನುಗಳತ್ತ ಹರಿಯಿತು. ರಂಗಮ್ಮನ ಸೂಕ್ಷ್ಮ
ದೃಷ್ಟಿ....
"ನೋಡಿ! ಅಲ್ಲಿದೆ!"