ಪುಟ:Rangammana Vathara.pdf/೭೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
ರಂಗಮ್ಮನ ವಠಾರ
65
 

....ವಠಾರದ ಮನೆಯಲ್ಲಿ ಒಂದೊಂದಾಗಿ ದೀಪಗಳು ಆರತೊಡಗಿದ್ದುವು
ಪ್ಯಾಂಟು ‍‌ ‍‍‍‍‍‍ಷರಟು ಧರಿಸಿದ್ದ ಯುವಕನೊಬ್ಬ ಚರ್ಮದ ಕಡತಚೀಲವನ್ನು ಎದೆಗೊತ್ತಿ
ಕೊಂಡು ಠೀವಿಯಿಂದ ಮಹಡಿಯ ಮೆಟ್ಟಲೇರುತ್ತಿದ್ದ. ವಠಾರಕ್ಕೆ ಹಿಂತಿರುಗುತ್ತಿದ್ದ
ಶಂಕರನಾರಾಯಣಯ್ಯ ಗೇಟಿನ ಸದ್ದು ಮಾಡಿದಾಗ ಆ ಯುವಕ ತಡೆದು ನಿಂತು,
ಕೆಳಗೆ ತಿರುಗಿ, ನೋಡಿದ. ಆ ಕತ್ತಲಲ್ಲಿ ಒಳಬಂದವರು ಯಾರೆಂಬುದು ಆತನಿಗೆ ಸ್ಪಷ್ಟ
ವಾಗಿ ತಿಳಿಯಲಿಲ್ಲ. ಆತ್ಮವಿಶ್ವಾಸದ ಅಧಿಕಾರಯುಕ್ತ ಸ್ವರದಲ್ಲಿ ಆತ ಕೇಳಿದ:
"ಯಾರದು?"
ಶಂಕರನರಾಯಣಯ್ಯನೇನು ಕಡಮೆ ಆಸಾಮಿಯೆ?
"ನಾನು."
"ಸುಬ್ಬುಕೃಷ್ಣಯ್ಯ?"
"ಅಲ್ಲ. ಶಂಕರನಾರಾಯಣಯ್ಯ-ಹೊಸಬ."
"ಓ... ಕತ್ತಲೇಲಿ ಕಾಣಿಸ್ಲಿಲ್ಲ. ಕ್ಷಮಿಸಿ."
"ಏನೂ ಪರವಾಗಿಲ್ಲ."
ಯುವಕ ತನ್ನ ಹೆಸರು ಹೇಳದೆಯೇ ಮೇಲಕ್ಕೆ ಏರಿದ. ನೀನು ಯಾರೋ
ನಾಳೆ ನೋಡ್ಕೋತೀನಿ_ಎಂದು ಶಂಕರನಾರಾಯಣಯ್ಯ ಮನಸಿನಲ್ಲೆ ಅಂದುಕೊಂಡ.
ಆತನ ದೃಷ್ಟಿ ಗೋಡೆಯತ್ತ ಸರಿಯಿತು. 'ಮನೆ ಬಾಡಿಗೆಗೆ ಇದೆ' ಬೋರ್ಡು
ಅಲ್ಲಿದ್ದಂತೆ ತೋರಲಿಲ್ಲ. ರಂಗಮ್ಮ ಅದನ್ನು ತೆಗೆದು ಒಳಕ್ಕೆ ಒಯ್ದು ಬಿಟ್ಟಿದ್ದರು.
ಹಿತ್ತಿಲ ಗೇಟನ್ನು ಭದ್ರವಾಗಿ ಮುಚ್ಚಿ, ವಠಾರಕ್ಕೆ ಹಳಬನೇನೋ ಎಂಬಂತೆ
ಕತ್ತಲೆಯಲ್ಲಿ ದೃಢ ಹೆಜ್ಜೆಗಳನ್ನಿಡುತ್ತ ಆತ ಕೊನೆಯ ಮನೆ ಸೇರಿದ.
ಮನೆಯೊಳಗಿನಿಂದ ಅಗರಬತ್ತಿಯ ಘಮಘಮ ವಾಸನೆ ಬರುತ್ತಿತ್ತು. ಅಡುಗೆ
ಮನೆಯಲ್ಲಿ ದೇವರಿಗೂ ಜಾಗ ಮಾಡಿಕೊಟ್ಟು, ಆ ಪಠದ ಮುಂದೆ ದೀಪವನ್ನೂ
ಅಗರಬತ್ತಿಯನ್ನೂ ಹಚ್ಚಿಟ್ಟು, ಚಂಪಾ ದೇವರಿಗೆ ನಮಸ್ಕಾರ ಮಾಡಿದ್ದಳು.
ಗಂಡ ಬರುತ್ತಲೇ ಆಕೆ ಕೇಳಿದಳು:
"ಏನ್ರೀ, ಇಲ್ಲಿ ತುಳಸೀಕಟ್ಟೆ ಇದೆ ತಾನೆ?ಕಾಣಿಸ್ಲೇ ಇಲ್ಲ.'
"ಎಂಥಾ ಮಾತಾಡ್ತೀಯೆ! ವಠಾರದಲ್ಲಿ ತುಳಸೀಕಟ್ಟೆ ಇಲ್ದೆ! ಹೊರಗೆ ಹಿತ್ತಿ
ಲಲ್ಲೇ ಇದೆ_ಒಂದು ಮೂಲೇಲಿ."
"ಸರಿ ಹಾಗಾದರೆ" ಎನ್ನುತ್ತ ಚಂಪಾ ಹಾಸಿಗೆ ಹಾಸತೊಡಗಿದಳು.
"ಅದನ್ನ ಆಮೇಲೆ ಮಾಡು-ಕಾಫಿ ಆರಿ ಹೋಗುತ್ತೆ. ಅಲ್ಲಿ ತಿಂಡಿ ಎಲ್ಲಾ
ಆಗ್ಹೋಗ್ಬಿಟ್ಟಿತ್ತು. ನಮ್ಮ ಸೌಭಾಗ್ಯಕ್ಕೆ ಸಿಕಿದ್ದೇ ಇದು-ಚೌಚೌ."
"ಹೋಗಲಿ ಬಿಡಿ. ಇಷ್ಟು ಸಾಲ್ದೇನು? ಹಣ್ಣು ಬೇರೆ ತಂದಿದೀರಾ..."
...ರಾತ್ರೆಯ ಉಪಹಾರ ಮುಗಿಯಿತು.

9