ಪುಟ:Rangammana Vathara.pdf/೭೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
ರಂಗಮ್ಮನ ವಠಾರ
67
 


ಪುಣ್ಯಾತ್ಮನಿಗೆ ಮತ್ತೆ ನಿದ್ದೆ ಬಂದುಬಿತ್ತಿದೆ. ಆ ಕತ್ತಲಲ್ಲೂ ಛಾವಣಿಯನ್ನೇ
ದಿತ್ತಿಸುತ್ತ, ವಠಾರದಿಂದ ಒಂದೊಂದಾಗಿ ಹೊರಬರುತ್ತಿದ್ದ ಬಗೆಬಗೆಯ ಸದ್ದುಗಳಿಗೆ
ಕಿವಿಗೊಡುತ್ತ, ನಿದ್ದೆ ಹೋಗಿದ್ದ ಮಗುವನ್ನು ಬಲತೋಳಿನಿಂದ ಬಳಸಿ ಚಂಪಾ
ಹೊತ್ತು ಕಳೆದಳು
...ಹೊರಗಿನಿಂದ ಯಾರದೋ ಸ್ವರ ಕೇಳಿಸಿತು.
"ಘಂಟೆ ಆರಾಯ್ತು. ಕಾಮಾಕ್ಷಿ ಮನೆ ಗಡಿಯಾರ ನೋಡ್ಕೊಂಡು ಬಂದೆ."
ಆರು ಆಗಿಹೋಯ್ತೆ? ಈ ವಠಾರದ ಗವಿಯೊಳಕ್ಕೆ ಬೆಳಕು ಇಳಿಯುವುದೇ
ತಡವೇನೋ?-ಎಂದು ಕೊಂಡಳು ಚಂಪಾ. ಮಲಗಿದ್ದು ಸಾಕೆಂದು ಎದ್ದು ಕುಳತಳು.
ಆಕೆಯ ಕಿವಿಗೆ ಬಿದ್ದ ಗಡಿಯಾರ ಎಂಬ ಪದ ಬೇರೆ ಯೋಚನೆಗಳಿಗೂ ಕಾರಣ
ವಾಯಿತು. ತನ್ನ ಬಾಣಂತಿತನದಲ್ಲಿ ಮಾರಾಟವಾಗಿ ಹೋಗಿತ್ತು ಗಂಡನ ಕೈ ಗಡಿಯಾರ.
ಆ ಬಳಿಕ ತಾನೆಷ್ಟು ಪೀಡಿಸಿದರೂ ಆತ ಹೊಸತೊಂದನ್ನು ಕೊಂಡುಕೊಳ್ಳಲಿಲ್ಲ. ಹಾಗೆ
ಕೊಂಡುಕೊಳ್ಳಲು ಹಣವಿರಲಿಲ್ಲ. ಅಲ್ಲಿಂದ ಇಲ್ಲಿಂದ ಆ ಕೆಲಸ ಈ ಕೆಲಸಕ್ಕೆಂದು
ಮುಂಗಡ ಪಡೆಯುತ್ತಿದ್ದ ಹಣದಿಂದಲೇ ಸಂಸಾರದ ವೆಚ್ಛ ಸಾಗುತಿತ್ತು. ಅದ
ರಲ್ಲಿಯೂ ನಾಲ್ಕು ಪುಡಿಕಾಸು ಎಂದಾದರೂ ಉಲಿದಾಗ, ತನಗಾಗಿ ಒಂದು ಸೀರೆ
ಯನ್ನೋ ರವಕೆ ಕಣವನ್ನೋ ಮಗುವಿನ ಲಂಗಕ್ಕಾಗಿ ಬಟ್ಟೆಯನ್ನೋ ಆತ ತರುತ್ತಿದ್ದ.
ಹಾಗೆ ತಂದಾಗ ಚಂಪಾವತಿಯ ಹೃದಯ ತುಂಬಿ ಬರುತ್ತಿತ್ತು. ಆದರೆ ತನ್ನ
ಸ್ವಂತಕ್ಕಾಗಿ ಆತ ಏನನ್ನೂ ಕೊಳ್ಳುತ್ತಿಲ್ಲವಲ್ಲಾ ಎಂದು ನೋವೂ ಆಗುತ್ತಿತ್ತು.
"ನಂಗೆ ಇದೆಲ್ಲಾ ಬೇಡೀಂದ್ರೆ.ಎಷ್ಟು ಸೀರೆ, ಎಷ್ತು ರವಕೆ-ಸಾಕು
ಇಷ‍್ಟೊಂದು," ಎಂದು ಗಂಡನೊಡನೆ ಆಕೆ ಜಗಳವಾಡಿದ್ದಳು.
"ನಿಂಗೆ ಬೇಡವಾದರೆ ಬೇರೆ ಯಾರಿಗಾದರೂ ಕೊಡ್ಲೇನು?"
-ಆತ ನಗುತ್ತ ಕೆಣಕಿ ಮಾತನಾಡಿದ್ದ.
"ಸಾಕು ತಮಾಷೆ.ಯಾವತ್ತೂಂದ್ರೆ ನೀವು ಗದಿಯಾರ ಕೊಂಡ್ಕೊಳ್ಳೋದು?"
-ಆಕೆ ರೇಗಿ ಕೇಳಿದ್ದಳು.
"ಗಡಿಯಾರದ ಯೋಚ್ನೆ ನಿಂಗೆ ಯಾತಕ್ಕೆ? ನೀನು ಹೇಳೋ ಹೊತ್ತಿಗೆ
ಮುಂಚೇನೆ ಮನೆ ಸೇರಿದ್ರೆ ಸಾಲ್ದೆ?"
ಗಂಡ ಹಾಗೆ ಹೇಳಿದಾಗ ತುಂಬು ನೋಟದಿಂದ ಅವನನ್ನು ತಾನು ನೋಡಿ
ದ್ದಳು. ಆತನೋ ಘಾಟಿ. ಆ ಪರಿಸ್ಥಿತಿಯ ಪೂಣ್ ಲಾಭ ಪಡೆದಿದ್ದ.
...ಚಂಪಾ ಬಿಚ್ಚಿದ್ದ ಕೂದಲ ರಾಶಿಯನ್ನು ಬಿಗಿ ಹಿಡಿದು ಗಂಟು ಹಾಕಿದಳು.
ಅಗಣಿ ತೆಗೆದು ಕದವನ್ನಿಷ್ಟು ಓರೆ ಮಾಡಿ ಇಣಕಿ ನೋಡಿ ಓಣಿಯುದ್ದಕ್ಕೂ ದೃಷ್ಟಿ
ಹಾಯಿಸಿದಳು ಹಾಗೆಯೇ ನಡು ಹಾದಿಯ ಮೂಲಕ ಮುಖ್ಯ ಮನೆಯನ್ನೂ ದಾಟಿ
ಹೊರ ಅಂಗಳಕ್ಕೆ ಹೋಗಿ,ವಠಾರದ ಆಚೆಗಿನ ಬೇರೆಯೇ ಒಂದು ಜಗತ್ತಿನಂತೆ ಕಂಡ.