ಪುಟ:Rangammana Vathara.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

81

ಗರಗಸದಿಂದ ಕುಯ್ಯುತ್ತಿದ್ದ ಹಾಗಾಯಿತು ಅವರಿಗೆ.
"ಚಿನ್ನ, ನಿನಗೆ ನಾನು ಸುಖ ಕೊಡಲೇ ಇಲ್ಲ."
ಭುಜದ ಮೇಲಿದ್ದ ತಲೆಯಲುಗಿತು. ತುಟಿಗಳೆಡೆಯಿಂದ ಮಾತು ಹೊರಡಲಿಲ್ಲ.
ಯಾವುದೋ ಯೋಚನೆಯ ನಡುವೆ ಅವರೆಂದರು:
"ಸದ್ಯಃ ಇಬ್ಬರೇ ಮಕ್ಕಳು..."
ಮಾತು ಹೊರಗೆ ನಿಂತರೂ,ಮನಸಿನೊಳಗೇ ಯೋಚನೆ ಮುಂದುವರಿಯಿತು:
ಇಬ್ಬರೇ ಮಕ್ಕಳು...ರಾಧಾ ಹುಟ್ಟಿದ ಅನಂತರ ಮತ್ತೊಮ್ಮೆ ತಾಯಿಯಾಗಲಿದ್ದ
ಆಕೆಗೆ ಗರ್ಭಸ್ರಾವವಾಯಿತು. ಆರೈಕೆ ಸರಿಯಾಗಿ ಆಗದೆ ಗರ್ಭಕೋಶದ ಕಾಹಿಲೆ
ಗಳಿಗೆ ಗುರಿಯಾದಳು. ದೀರ್ಘಕಾಲ ಕಳೆದ ಮೇಲೆ ಚೇತರಿಸಿಕೊಂಡಳು ನಿಜ,
ಆದರೆ ಮತ್ತೆ ತಾಯಿಯಾಗಲಿಲ್ಲ. ಹಾಗಾದುದು ದೇವರ ಕೃಪೆಯೇನೋ ಎಂದು
ಅವರಿಗೆ ಒಮ್ಮೊಮ್ಮೆ ಅನಿಸುತ್ತಿತ್ತು. ಅದಲ್ಲದೆ ಹೆಚ್ಚು ಮಕ್ಕಳೇನಾದರೂ ಆಗಿದ್ದರೆ
ಅವುಗಳ ಗತಿ? ಈಗ ಇರುವವರು ಒಬ್ಬರೇ......ಮಗಳಿಗೊಂದು ಮದುವೆಯಾಗಿ
ಮಗನಿಗೊಂದು ಕೆಲಸ ದೊರೆತರೆ, ತಮ್ಮ ಸಂಸಾರದ ದೊಡ್ಡ ಸಮಸ್ಯೆಗಳು ಬಗೆಹರಿದ
ಹಾಗೆಯೇ.
ಹೀಗೆಂದು ಅವರು ಯೋಚಿಸುತ್ತಿದ್ದರು. ಆಕೆ ಮಾತ್ರ ಕನಸಿನ ನಿದ್ದೆಯಲ್ಲಿ
ದ್ದಂತೆ ಕಣ್ಣುಮುಚ್ಚಿಕೊಂಡೇ ಇದ್ದಳು.
ತಮ್ಮ ಯೋಜನೆಗಳಿಗೊಂದು ಸುಂದರ ರೂಪವನ್ನು ಕೊಡಲೆತ್ನಿಸುತ್ತ
ಅವರೆಂದರು:
"ಇನ್ನು ಸ್ವಲ್ಪ ದಿವಸ ಈ ಕಷ್ಟ. ಯಾವಾಗಲೂ ಹೀಗೇ ಇರೋಲ್ಲ ಚಿನ್ನ."
'ಹೌದು' ಎಂದೋ, 'ಇದು ಹುಚ್ಚು ಮಾತು' ಎಂದೊ ಅನ್ನುವಂತೆ ಭುಜದ
ಮೇಲಿದ್ದ ಆಕೆಯ ತಲೆ ಅಲುಗಿತು.
ಕೊನೆಯ ಕೊಠಡಿಯ ಬೀಗ ತೆಗೆದ ಸಪ್ಪಳವಾಯಿತು. ಮಾತಿನ ಸದ್ದು. ಆಕೆ
ಒಮ್ಮೆಲೆ ಎಚ್ಚೆತ್ತು, ತಲೆ ಎತ್ತಿ, ಗಂಡನಿಂದ ದೂರ ಕುಳಿತಳು. ಕಳ್ಳತನದಲ್ಲೇನನ್ನೊ
ಮಾಡುತ್ತಿದ್ದವರ ಹಾಗಾಯಿತು ಆಕೆಯ ಸ್ಥಿತಿ.
"ಸ್ಕೂಲು ಹುಡುಗರು ಬಂದರೂಂತ ಕಾಣುತ್ತೆ."
__ಎಂದಳು ಆಕೆ. ಶಾಂತವಾಗಿತ್ತು ಅವಳ ಮುಖಮುದ್ರೆ.
ಆ ಮಾತನ್ನು ಗಣನೆಗೆ ತೆಗೆದುಕೊಳ್ಳದೆ ತಮ್ಮ ಯೋಚನೆಯನ್ನೇ ಮುಂದು
ವರಿಸುತ್ತ ಅವರೆಂದರು:
"ಎಷ್ಟೊಂದು ಸೊರಗಿದ್ದೀಯಾ ನೀನು?"
"ನನಗೇನೂ ಆಗಿಲ್ಲ. ನಾನು ಚೆನ್ನಾಗಿದೀನಿ."
ಗಂಡ ಆಡಿದ ಅಮೃತದಂತಹ ಮಾತಿಗಾಗಿ ದೃಷ್ಟಿಯಿಂದಲೇ ಕೃತಜ್ಞತೆಯನ್ನು

11