ಪುಟ:Rangammana Vathara.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

83

"ಅವನಿಗೆ ಸ್ನೇಹಿತರು ಇದಾರೇನು ಯಾರಾದರೂ?"

"ಯಾರೂ ಕಾಣೆನಪ್ಪಾ. ಮನೆಗೆ ಬರೋದೇನೂ ತಡ ಮಾಡೋಲ್ಲ.ಸಾಮಾನ್ಯ ವಾಗಿ ಒಬ್ನೇ ಇರ್ತಾನೆ..."

"ಬೆಳೆಯೋ ಹುಡುಗ...ನಾವು ಅನುಭವಿಸ್ತಿರೋ ಪಾಡು ಅರ್ಥವಾಗಿದೇಂತ ತೋರುತ್ತೆ..."

ಅವರು ತಪ್ಪಾಗಿ ಊಹಿಸಿರಲಿಲ್ಲ.

ಮಗನ ಬಳಿಕ ಮಗಳ ಸರದಿ...'ಚಿಕ್ಕವಳು'ಎಂದು ಎಷ್ಟೇ ಸಮಾಧಾನ ಹೇಳಿ ಕೊಂಡರೂ ಈಗಲೇ ಹುಡುಗಿ ಬೆಳೆದುಬಿಟ್ಟಿದ್ದಾಳೆ. ಅವರಮ್ಮನದೇ ರೂಪು. ಯಾವುದರಲ್ಲಿ ಕಡಮೆ ಆಕೆ? ಐಶ್ವರ್ಯದಲ್ಲಿ ತಾನೆ? ಅದು ದೊಡ್ಡದ್ದಲ್ಲ. ನಾವು ಶ್ರೀಮಂತರೆಂದು ಹೆಳಿಕೊಂಡದ್ದೇ ಇಲ್ಲ ಯಾವತ್ತೂ...

ಪಕ್ಕದ ಕೊಠಡಿ ಮನೆಯಲ್ಲಿ ಒಬ್ಬಂಟಿಗನಾಗಿ ವಾಸಿಸುತ್ತಿರುವ ಆ ಯುವಕ. ತಾವು ಒಂದೆರಡು ಸಾರೆ ಮಾತನಾಡಿಸಿದ್ದರು. ಸಂಭಾವಿತನಾಗಿಯೇ ತೋರಿದ್ದ.

"ಪಕ್ಕದ ಮನೆಯಾತ__"

"ಏನು?"

ಅವರು ಒಂದನ್ನು ಯೋಚಿಸಿದರು. ಆಕೆಯೂ ಒಂದನ್ನು ಯೋಚಿಸಿದಳು. ಇಬ್ಬರು ಯೋಚಿಸಿದುದೂ ಒಂದೇ ಆಗಿತ್ತು.

"ಚೆನ್ನಾಗಿದಾನಾ?"

"ಇದಾನೆ, ಒಳ್ಳೆಯವನು ಪಾಪ. ಯಾರ ತಂಟೆಗೂ ಹೋಗೊಲ್ಲ."

ಅವರು ಮುಂದೆ ಮಾತನಾಡಲಿಲ್ಲ. ದೄಷ್ಟಿ ಛಾವಣಿಯನ್ನೇ ನೋಡುತ್ತಿದ್ದರೂ ಯೋಚನೆಗಳು ಒಂದನ್ನೊಂದು ಹಿಂಬಾಲಿಸಿ ದೂರ ದೂರ ಸಾಗಿದುವು.

ಆಕೆ ಹೇಳಿದಳು:

"ಏಳಿ, ಕಾಫಿ ಸೋಸಿದ್ದಾಯ್ತು."




ಜಯರಾಮು ವಾಚನಾಲಯಕ್ಕೆಂದು ಹೊರಟಿದ್ದ ನಿಜ. ಆದರೆ ಹತ್ತು ಹೆಜ್ಜೆ ಹೋದ ಮೇಲೆ ಆತ ತನ್ನ ಮನಸ್ಸು ಬದಲಾಯಿಸಿದ. ಕೇಳಿದ್ದ ಒಂದು ಪ್ರಶ್ನೆಗೆ ಸಂಪಾದಕರಿಂದ ಉತ್ತರ, ಬರೆದಿದ್ದ ಒಂದು ಓಲೆಗೆ ಮಕ್ಕಳ ಬಳಗದ ಅಣ್ಣನಿಂದ ಮಾರೋಲೆ, _ಇಷ್ಟನ್ನು ಆತ ಆ ವಾರದ ಪತ್ರಿಕೆಯಲ್ಲಿ ನಿರೀಕ್ಷಿಸಿದ್ದ. ಇಷ್ಟಲ್ಲದೆ ಎರಡು ಪತ್ರಿಕೆಗಳಿಗೆ ಎರಡು ಸಣ್ಣ ಕತೆಗಳನ್ನೂ ಆತ ಕಳುಹಿಸಿ ಬಹಳ ದಿನಗಳಾಗಿ