ಪುಟ:Rangammana Vathara.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

85

ವಿಸ್ತಾರವಾದ ಬಂಡೆಗಲ್ಲು . ಕೆಳಗೆ ಒಂದೆಡೆ ಸಿಡಿಮದ್ದು ಹಾಕಿ ಒಂದಷ್ಟು ಭಾಗ
ವನ್ನು ಒಡೆದು ಒಯ್ದಿದ್ದರು. ಆದರೂ ಎಷ್ಟೊಂದು ಆಚಲವಾಗಿ ಗಂಭೀರವಾಗಿ
ಅದು ನಿಂತಿತ್ತು! ಏನಾದರೊಂದು ಘಟನೆಯಿಂದ ಹೃದಯಕ್ಕೆ ಆಘಾತವಾದಾಗ, ಮನ
ಸ್ಸಿಗೆ ನೋವಾದಾಗ, ಜಯರಾಮು "ಈ ಬಂಡೆ ಕಲ್ಲಿನ ಬಲ ನನಾಗಿರಬಾರದೆ?" ಎಂದು
ಕೊಳ್ಳುತ್ತಿದ್ದ.
ಪ್ರೌಢಶಾಲೆಯಲ್ಲಿದ್ದಾಗ ದೊಡ್ಡ ಹುಡುಗರು ಅವನಿಗೆ ಕೀಟಲೆ ಕೊಟ್ಟು ಗೇಲಿ
ಮಾಡುತ್ತಿದ್ದರು:
"ಏ ಹುಡುಗಿ!"
ಆಗ ಜಯರಾಮು ನೋಡಲು ಸುಂದರನಾಗಿದ್ದ. ಮುಟ್ಟಿದರೆ ಮುದುಡಿ
ಕೊಂಡು ತನ್ನಷ್ಟಕ್ಕೆ ಸುಮ್ಮನಿರುತ್ತಿದ್ದ. ತಾನು ದುರ್ಬಲನೆಂಬುದರ ಅರಿವಾದಾಗಲೆಲ್ಲ
ಅವನಿಗೆ ಅಳು ಬರುತ್ತಿತ್ತು.
ಆದರೆ ಕಾಲೇಜಿನ ಮೆಟ್ಟಿಲೇರುವ ಹೊತ್ತಿಗೆ ಅವನಲ್ಲಿ ಮಾರ್ಪಾಟಾಗಿತ್ತು.
ಮುಖದ ಮೇಲೆ ಹೇರಳವಾಗಿ ಮೂಡಿದ ತಾರುಣ್ಯ ಪೀಟಿಕೆಗಳು ಅವನ ಸೌಂದರ್ಯ
ದಿಂದ ಹುಡುಗಿತನವನ್ನು ಕಸಿದುಕೊಂಡುವು. ಕಾಲೇಜಿಗೆ ಬರಲು ಬರಿಗಾಲಿನಲ್ಲಿ
ಮೈಲು ಮೈಲುಗಳ ನಡಿಗೆ, ಬರಿಗೈ, ಬರಿಜೇಬು, ಇತರ ಹಲವಾರು ವಿದ್ಯಾರ್ಥಿಗಳ
ವಿಲಾಸಮಯ ಜೀವನದೊಡನೆ ತನ್ನದರ ಹೋಲಿಕೆ ಇವೆಲ್ಲ ತನ್ನ ಕುಟುಂಬದ ಇರುವಿ
ಕೆಯ ನಿಜಸ್ವರೂಪದ ಪರಿಚಯವನ್ನು ಆತನಿಗೆ ಮಾಡಿಕೊಟ್ಟುವು.
ಆ ಬಳಿಕ ಆತನ ದೃಷ್ಟಿ ಸುತ್ತುಮುತ್ತಲೂ ಹರಿದು, ತನ್ನ ಕುಟುಂಬದ ರೂಪು
ರೇಖೆಗಳೇ ಇದ್ದ ಇತರ ನೂರು ಕುಟುಂಬಗಳನ್ನು ಗುರುತಿಸಿತು. ತಮಗಿಂತ ಕಡು
ಬಡವರಾದ ಸಹಸ್ರ ಜನರನ್ನೂ ಕಂಡಿತು. ಸಂಖ್ಯೆಯಲ್ಲಿ ಅಲ್ಪರಾದ ಸುಖಜೀವಿ
ಭಾಗ್ಯವಂತರನ್ನೂ ಆತ ನೋಡಿದ. ಸಾಮರಸ್ಯವಿಲ್ಲದ ಜೀವನ....ದಿನನಿತ್ಯದ ಅನು
ಭವಗಳೊ! ಪ್ರತಿಯೊಂದು ಸೂಜಿ ಚುಚ್ಚಿದ ಹಾಗೆ ಅಚ್ಚೊತ್ತಿ ಹೋಗುತ್ತಿತ್ತು.
ತನ್ನ ಪ್ರೀತಿಯ ತಾಯಿ ಇತರ ಹಲವರಂತೆ ಯಾಕೆ ಮೈ ತುಂಬಿಕೊಂಡಿಲ್ಲ?
ಆಕೆಯ ಮುಖವನ್ನು ಯಾವಾಗಲೂ ದುಃಖದ ಮೋಡ ಯಾಕೆ ಕವಿದೇ ಇರುತ್ತದೆ?
ಇದು ಈಗೀಗ ಜಯರಾಮುಗೆ ಅರ್ಥವಾಗುತ್ತಿತ್ತು.
ತಂಗಿ ರಾಧೆಯನ್ನು ಆತ ತುಂಬಾ ಪ್ರೀತಿಸುತ್ತಿದ್ದ. ಮಕ್ಕಳು ಅನ್ಯೋನ್ಯ
ವಾಗಿರುವುದನ್ನು ಕಂಡು ತಾಯಿಗೆ ಸಮಾಧಾನ. ಆದರೆ ಆ ತಂಗಿ ಅವನ ಜತೆಯಲ್ಲೇ
ಸದಾ ಕಾಲವೂ ಇರುವುದು ಸಾಧ್ಯವಿರಲಿಲ್ಲ. ರಾಧಾ ಇನ್ನೊಬ್ಬರ ಮನೆಗೆ ಹೋಗ
ಬೇಕಾದ ವೇಳೆ ಸಮೀಪಿಸುತ್ತಿತ್ತು. ಅವಳಿಗಾಗಿ ಆ ವರೆಗೂ ಯಾವುದೇ ಮನೆಯ
ಬಾಗಿಲು ತೆರೆದಿಲ್ಲವಾದರೂ ನೋಡುತ್ತಿದ್ದ ಎಲ್ಲರ ದೃಷ್ಟಿಯಲ್ಲಿ ಮದುವೆಯ ದಿನ
ಹತ್ತಿರ ಬರುತ್ತಿತ್ತೆಂಬುದು ಸ್ಪಷ್ಟವಾಗಿತ್ತು.

ಈ ಸಲ ಪ್ರವಾಸದಿಂದ ಹಿಂತಿರುಗಿ ಬಂದ ತಂದೆ....ಒಂದು ಸಂಸಾರವನ್ನು