ವಿಷಯಕ್ಕೆ ಹೋಗು

ಪುಟ:Uttara Karnataka Janapada Kathegalu.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

100

ಜನಪದ ಕಥೆಗಳು

ಮಾತುಗಳಾವವೆಂದು ಕೇಳಿದನು. ಅವರು ಕ್ರಮವಾಗಿ ಹೀಗೆ ಹೇಳಿದರು -

ಕುರುಡನ ಕೋಣೆಯ ಕಾವಲುಗಾರ - ``ಮನಸ್ಸಿನಂತೆ ಮಹಾದೇವ ! ಮನಸ್ಸಿನಂತೆ ಮಹಾದೇವ ! ಎನ್ನುತ್ತ ಕುಣಿದಾಡುತ್ತಿದ್ದನು ಆ ಕುರುಡ.

ಹೆಂಗಸಿನ ಕೋಣೆಯ ಕಾವಲುಗಾರ - ``ಗಂಡನಪ್ಪಣೆ ಮೀರಬಾರದೆಂದು ತಂದೆಗೆ ಸಮಾನನಾದ ಆ ಕುರುಡ ಮುದುಕನ ಕೈಹಿಡಿದು ಸರಿದಾರಿಗೆ ಹಚ್ಚಿದರೆ, `ಹೆಂಡತಿ ಕೈಕೊಸರಿಕೊಂಡು ಓಡಿಹೋಗುವಳೋ ಅಪ್ಪಾ' ಎಂದು ಹೊಯ್ಕೊಂಡರೆ ನಾನೇನು ಹಣೆಹಣೆ ಗಟ್ಟಿಸಿಕೊಳ್ಳಲಾ ? ಎಂಥ ವೇಳೆ ತಂದೆಯೋ ದೇವರೇ ಎನ್ನುತ್ತ ಆಕೆ ಬೆಳತನಕ ಗೋಳಾಡಿ ಅತ್ತಳು.

ಗಂಡನ ಕೋಣೆಯ ಕಾವಲುಗಾರ - ``ಆ ಕುರುಡನನ್ನು ನೋಡಿ ನನಗೇಕೆ ದಯೆ ಬಂದಿತೋ ಏನೋ. ಆತನಿಗೆ ಸರಿದಾರಿಗೆ ಹಚ್ಚುವ ಕೆಲಸವನ್ನು ಹೆಂಡತಿಗೆ ಹೇಳದೆ ನಾನೇ ಮಾಡಿದ್ದರೆ ಎಷ್ಟು ಚೆನ್ನಾಗಿತ್ತಲ್ಲ ! ಎಂದು ಗಳಿಗೆಗೊಮ್ಮೆ ಮಿಡುಕುತ್ತಿದ್ದನು.

ಆ ಎಲ್ಲ ಹೇಳಿಕೆಗಳನ್ನು, ಕೇಳಿ ಗೌಡನು, ಆ ಹೆಣ್ಣು ಮಗಳು ಕುರುಡನ ಹೆಂಡತಿ ಅಲ್ಲವೆಂದು ನಿರ್ಣಯಿಸಿ ಆಕೆಯನ್ನು ಆಕೆಯ ಗಂಡನೊಡನೆ ಕಳಿಸಿದನು. ಕುರುಡ ಮುದುಕನನ್ನು ಬಯ್ದು ಬೆದರಿಸಿ ಊರಹೊರಗೆ ಹಾಕಿಸಿದನು.