ವಿಷಯಕ್ಕೆ ಹೋಗು

ಪುಟ:Uttara Karnataka Janapada Kathegalu.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

116


ಸೊಸೆಗೇನು ಅಧಿಕಾರ ?

ಸೆರಗಿನಿಂದ ಕೈಒರೆಸಿಕೊಂಡು ದಾರಿಯಲ್ಲಿ ಬರುತ್ತಿದ್ದ ನೀಲಜ್ಜಿಯನ್ನು ಕಂಡು ಸಂಗಮ್ಮ ಕೇಳಿದಳು - ``ಎಲ್ಲಿಗೆ ಹೋಗಿದ್ದೆ ನೀಲಜ್ಜಿ ?


``ನಿಮ್ಮ ಮನೆಗೆ ಹೋಗಿದ್ದೆ. ಮುಕ್ಕು ಮಜ್ಜಿಗೆ ಸಿಕ್ಕಾವೆಂದು ?

``ಏನಂದರು ? ಸಂಗಮ್ಮನ ಪ್ರಶ್ನೆ.

``ಮಜ್ಜಿಗೆ ಆಗಿಲ್ಲವೆಂದರು ನೀಲಜ್ಜಿಯ ಪಡಿನುಡಿ.

``ಯಾರು ಹೇಳಿದರು ಹೀಗೆ ?

``ನಿನ್ನ ಸೊಸೆ ನಿಂಬೆಕ್ಕ.

``ಆಕೆಗೇನು ಅಧಿಕಾರ ಹಾಗೆ ಹೇಳಲಿಕ್ಕೆ. ಬಾನನ್ನೊಡನೆ ಎಂದಳು ಸಂಗಮ್ಮ. ಸಂಗಮ್ಮ ಮುಂದೆ ಮುಂದೆ, ನೀಲಜ್ಜಿ ಹಿಂದೆ ಹಿಂದೆ. ಹತ್ತುಮಾರು ಹೋಗುವಷ್ಟರಲ್ಲಿ ಮನೆ ಬಂತು. ಸಂಗಮ್ಮ ಬಿರಬಿರನೆ ತಲೆವಾಗಿಲು ಹೊಕ್ಕು ಪಡಸಾಲೆಯನ್ನು ಏರಿದಳು. ನೀಲಜ್ಜಿಯು ಮೆಲ್ಲನೆ ನಡೆದು ಬಂದು ಮೆಟ್ಟುಗಟ್ಟೆಯ ಬಳಿ ನಿಂತುಕೊಂಡಳು.

``ತಾ ಇಲ್ಲಿ. ಮಜ್ಜಿಗೆ ಒಯ್ಯುವುದಕ್ಕೆ ಏನು ತಂದಿರುವಿ? ಎನ್ನುತ್ತ ಸಂಗವ್ವನು ಆಕೆ ಕೊಟ್ಟ ಚಿಕ್ಕ ಗಡಿಗೆಯನ್ನು ತೆಗೆದುಕೊಂಡು ಅಡಿಗೆ ಮನೆ ಹೊಕ್ಕಳು. ಸಂಗಮ್ಮನು ಮರಳಿ ಬರುವ ದಾರಿಯನ್ನೇ ಮಿಕಿಮಿಕಿ ನೋಡುತ್ತ ನೀಲಜ್ಜಿ ನಿಂತುಕೊಳ್ಳುವಷ್ಟರಲ್ಲಿ ಸಂಗಮ್ಮ ಹೊರಕ್ಕೆ ಬಂದೇ ಬಿಟ್ಟಳು. ``ನಿನ್ನ ಮಕ್ಕಳ ಹೊಟ್ಟೆ ತಣ್ಣಗಾಗಲಿ ಸಂಗೂ ಎಂದು ನೀಲಜ್ಜಿ ಹರಕೆ ನುಡಿಯಾಡುತ್ತಿರುವಾಗಲೇ ಸಂಗಮ್ಮ -

``ಇಗಾ ಅಜ್ಜಿ. ಈ ಹೊತ್ತು ಮಜ್ಜಿಗೆ ಆಗಿಲ್ಲ ಎನ್ನುತ್ತ ಆಕೆಯ ಗಡಿಗೆಯನ್ನು ಇದ್ದಕ್ಕಿದ್ದ ಹಾಗೆ ಒಪ್ಪಿಸಿದಳು. ``ಅಯ„ ! ಅದೇ ಮಾತು ಖರೇ ಆಯ್ತಲ್ಲ ಎನ್ನುತ್ತ ನೀಲಜ್ಜಿ ತನ್ನ ಮನೆಯ ಹಾದಿ ಹಿಡಿದಳು.

ಮಜ್ಜಿಗೆ ಆಗಿಲ್ಲವೆಂದು ಹೇಳುವುದಕ್ಕೆ ಸೊಸೆಗೇನು ಅಧಿಕಾರ ? ಆ ಮಾತನ್ನು ಅತ್ತೆಯಾದವಳೇ ಹೇಳಬೇಕು ಅಲ್ಲವೇ ?