೧
ವಿಶ್ವವಿದ್ಯಾನಿಲಯದ ಆಳು ವಿಶಾಲಕ್ಷಿಯ ಮನೆ ಹುಡುಕಿಕೊಂಡು ಬಂದಿದ್ದ. ಅವನ ಸೈಕಲಿನ ಕೊರಳಿನಲ್ಲಿ ಮಾಸಿದ ಚೀಲ ತೂಗಾಡುತ್ತಿತ್ತು. ವಾಹನವನ್ನು ಹಿತ್ತಿಲಗೋಡೆಗೊರಗಿಸಿ, ಪುಟ್ಟದೊಂದು ಪ್ಯಾಕೆಟನ್ನು ಆ ಚೀಲದಿಂದ ಹೊರತೆಗೆದ. ಆ ಕಟ್ಟನ್ನು ಹಿಂಬಾಲಿಸಿತು ಆತನ 'ಡೆಲಿವರಿ' ಪುಸ್ತಕ.
ಬಂದುದೇನೆಂಬುದು, ಹೊಸ್ತಿಲಲ್ಲಿ ನಿಂತ ವಿಶಾಲಾಕ್ಷಿಗೆ ಹೊಳೆಯಲೇ ಇಲ್ಲ. ಬರಿಯ ಲಕೋಟೆಯಾಗಿದ್ದರೆ ಊಹೆ ಸುಲಭವಾಗುತ್ತಿತ್ತು. ಆದರೆ ಆಳು ತಂದಿದ್ದುದು ಪ್ಯಾಕೆಟ್ತು - ಸಾಕಷ್ಟು ಗಾತ್ರದ ಪ್ಯಾಕೆಟ್ತು.
ಕಾತರ ಬೆರೆತ ಕುತೂಹಲದೊಂದಿಗೆ ಅವಳು ಕೇಳಿದಳು:
"ಏನಪ್ಪಾ ಅದು?"
ಅದೇನೆಂಬುದನ್ನು ಜವಾನ ತಿಳಿದಿರಬೇಕಾದ ಅಗತ್ಯವೇನೂ ಇರಲಿಲ್ಲ. ಆದರೂ, ವಿಶ್ವವಿದ್ಯಾನಿಲಯದ ಆಗುಹೋಗುಗಳನ್ನೆಲ್ಲ ಚೆನ್ನಾಗಿ ಬಲ್ಲ ಪ್ರಚಂಡ ಆತ.
"ಪ್ರಬುದ್ದ ಕರ್ಣಾಟಕ."
"ಓ!"
ತುಸು ತಡವಾಗಿ ಬಂದಿದ್ದ ಆಶ್ವಯುಜ ಸಂಚಿಕೆ. ತನ್ನ ಲೇಖನ ಪ್ರಕಟವಾಗಿರಬೇಕು ಹಾಗಾದರೆ!
ಹಿಂದೆ ನೌಕರಿ ದೊರೆತು ನೇಮಕಪತ್ರ ಬಂದಿದ್ದಾಗ, ಮುಂದೆ ಉತ್ತರ ಭಾರತದಿಂದ ಅಣ್ಣ ಬರೆದ ಮೊದಲ್ ಕಾಗದ ಕೈ ಸೇರಿದ್ದಾಗ ಹೊಡೆದುಕೊಂಡಿದ್ದ ರೀತಿಯಲ್ಲೇ ವಿಶಾಲಾಕ್ಷಿಯ ಎದೆಗುಂಡಿಗೆ ಈಗಲೂ ಡವಡವಿಸಿತು.