ವಿಷಯಕ್ಕೆ ಹೋಗು

ಪುಟ:Valmeeki Ramayana Shaapa Mattu Vara.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಪಾದಪಿ ವರಾದಪಿ!

೨೩

ಸಾವು ಎಂಬ ಶಾಪವಾಣಿಯನ್ನು ನುಡಿದಾಗ ಪರೀಕ್ಷಿತನು ಅವನೆದುರಿನಲ್ಲಿ ಇರಲಿಲ್ಲ. ``ಭರತನು ಯುವರಾಜ್ಯ ಪದವನ್ನು ಸ್ವೀಕರಿಸಿದರೆ, ಆತನಿಂದ ನಡೆಯಬಹುದಾದ ಶ್ರಾದ್ಧಾದಿಕ್ರಿಯೆಗಳು ನನಗೆ ತಲುಪಕೂಡದು! ಎಂಬ ಶಾಪವಾಣಿಯನ್ನು ದಶರಥನು ನುಡಿದಾಗ ಭರತನು ಅಲ್ಲಿರಲಿಲ್ಲ. ಭರತನು ಆಗ ಆತನ ತಾತನ ಮನೆಯಲ್ಲಿದ್ದನು. ಈ ರೀತಿ ಶಾಪ ಅಥವ ವರ ಹೊಂದುವ ವ್ಯಕ್ತಿ ಸನಿಹದಲ್ಲಿರದಿದ್ದರೆ ಪ್ರತೀಕಗಳ ಮಾಧ್ಯಮದಿಂದ ಶಾಪ-ವರಗಳನ್ನು ಕೊಡಲಾಗುತ್ತದೆ. ಇವು ಕೂಡ ಆ ವ್ಯಕ್ತಿಗಳಿಗೆ ಸರಿಯಾಗಿ ತಾಗುತ್ತವೆ ಎಂದು ನಂಬುತ್ತಾರೆ. ಆಹಾರ, ಪಾನೀಯ, ಬೊಂಬೆ ಆದಿಗಳನ್ನು ಪ್ರತೀಕ ಇಲ್ಲವೆ ಮಾಧ್ಯಮದಂತೆ ಯೋಜಿಸುತ್ತಾರೆ.

ಶಾಪ ಹೊಂದಿದ ವ್ಯಕ್ತಿ ಶಾಪಕ್ಕೆ ಈಡಾಗಲೇಬೇಕು; ಅದನ್ನು ನಿರಾಕರಿಸುವ ಸ್ವಾತಂತÀ್ರ್ಯ ಅವರಿಗೆ ಇರುವುದಿಲ್ಲ. ವರದ ವಿಷಯದಲ್ಲಿ ಅದನ್ನು ಸ್ವೀಕರಿಸಲೂ ಬಹುದು; ಬೇಡವೆಂದು ನಿರಾಕರಿಸಲೂಬಹುದು. ಬೇಡಿಕೊಂಡ ವರಗಳಿಂದ ಫಲ ದೊರೆಯುವುದರಿಂದ `ಯಾಚಿತ' ವರಗಳನ್ನು ಸಾಮಾನ್ಯವಾಗಿ ಯಾರೂ ನಿರಾಕರಿಸುವುದಿಲ್ಲ. ರಾಮಾಯಣದಲ್ಲಿ ಮಾತ್ರ ಈ ಬಗ್ಗೆ ಒಂದು ಅಪವಾದವಿದೆ. `ಇಲ' ಎಂಬಾತನು ಬೇಡಿಕೊಂಡ ವರವನ್ನು ನಂತರ ಬೇಕಿಲ್ಲವೆಂದಿದ್ದಾನೆ. ಈ ರಾಜನು ಒಂದು ವಿಶೇಷ ಪ್ರದೇಶವನ್ನು ಸೇರಿದಾಗ ಅಲ್ಲಿಯ ಸ್ಥಲಮಹಾತ್ಮ್ಯದಿಂದ `ಸ್ತ್ರೀ' ಆಗಿ ಪರಿವರ್ತನೆ ಹೊಂದಿದನು. ಆಗ ಆತನು ಶಿವನ ಬಳಿ ಹೋಗಿ ವರವನ್ನು ಯಾಚಿಸಿದನು. ಶಿವನು ``ಪುರುಷತ್ವ ಒಂದನ್ನು ಬಿಟ್ಟು ಬೇರೆ ಯಾವದನ್ನಾದರೂ ಬೇಡಿಕೊ! ಎಂದನು. ಇಲರಾಜನಿಗೆ ಪುರುಷತ್ವವೇ ಬೇಕಿತ್ತು, ಹೀಗಾಗಿ ಶಿವನು ಕೊಡಬಯಸಿದ ವರವನ್ನು ಇಲನು ನಿರಾಕರಿಸಿದನು. ರಮನು ಸಹ ಶರಭಂಗ ಋಷಿಯು ಕೊಟ್ಟ ವರವನ್ನು `ಬೇಡ'ವೆಂದನು. ಅದೇ ರೀತಿ ಸೀತೆಯು ಅನಸೂಯೆಯಿತ್ತ ವರವನ್ನು ಸ್ವೀಕರಿಸಲಿಲ್ಲ. ಈ ಬಗೆಯಾಗಿ ಅಸ್ವೀಕೃತವಾದ ವರಗಳು ರಾಮಾಯಣದಲ್ಲಿ ಸಾಕಷ್ಟಿವೆ. ವರಗಳಲ್ಲಿ ಯಾಚಿತ ವರ ಮತ್ತು ಅಯಾಚಿತ ವರ ಎಂಬ ಎರಡು ಪ್ರಕಾರಗಳಿವೆ: ಅದರ ಉಲ್ಲೇಖವು ಮುಂದೆ ಬಂದಿದೆ. ಶಾಪಗಳನ್ನು ಯಾರೂ ಬೇಡಿಕೊಳ್ಳುವುದಿಲ್ಲ. ಹೀಗಿರುವುದರಿಂದ ಶಾಪಗಳೆಲ್ಲ `ಅಯಾಚಿತ'ವಿರುತ್ತವೆ. ನಮಸ್ಕರಿಸಿದ ನಂತರ ಆಶೀರ್ವದಿಸುತ್ತಾರೆ. ಇದೂ ಸಹ ಅಯಚಿತ ಸಂಗತಿ. `ಆಶೀರ್ವಾದ' ಒಂದು ಔಪಚಾರಿಕ ಭಾಗವಿರುತ್ತದೆ. ಕೆಲವೊಮ್ಮೆ ಆಶೀರ್ವಾದವನ್ನು ಬೇಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಯಾಚಿತ ಆಶೀರ್ವಾದವು ಕೂಡ ಅಯಾಚಿತವಿದ್ದಂತೆಯೇ