ಪುಟ:Vimoochane.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಟಿಕೇಟು ಕೊಂಡುಕೊಂಡು ನಾನು ಪ್ರಯಾಣ ಮಾಡಿದೆ. ಅದು ನನ್ನ ಮೊದಲ ರೈಲ್ವೆ ಪ್ರಯಾಣ. ರಾತ್ರೆ ಕಳೆದು ಬೆಳಗಾಯಿತು. ಆಮೇಲೆ ರಾತ್ರೆ, ಮತ್ತೆ ಹಗಲು. ಹಾದಿಯಲ್ಲಿ ನಾನು, ಒಮ್ಮೆಯೂ ಕೆಳಕ್ಕಿಳಿಯಲಿಲ್ಲ. ಅಜ್ಜಿ ಕೊಟ್ಟ ಪೊಟ್ಟಣವನ್ನೂ ಬಿಚ್ಚಲಿಲ್ಲ. ಕಿಟಕಿಯ ಬಳಿ ನಿಲ್ಧಾಣಗಳಲ್ಲಿ ಏನನ್ನಾದರೂ ಕೊಂಡುಕೊಂಡು ತಿನ್ನುತ್ತಿದ್ದೆ. ಹಲವು ಊರುಗಳು ಹಿಂದೆ ಉಳಿದುವು. ನಾನಾ ವಿಧವಾಗಿ ಕನ್ನಡ ಮಾತನಾಡುವ ಜನ ಹತ್ತುತ್ತಿದ್ದರು, ಇಳಿಯುತ್ತಿದ್ದರು. ಆಮೇಲೆ ಮರಾಠಿ ಭಾಷೆ--ಹಿಂದೂಸ್ಥಾನಿ. ನನಗೆ ಜಟಕಾ ಸಾಬಿಗಳ ಕ್ಯಾಬೇ ಮಾತು ಸ್ವಲ್ಪ ಸ್ವಲ್ಪ ಬರುತ್ತಿತ್ತು........ಆ ಹೊಸ ವಾತಾವರಣ ಅಪರಿ ಚಿತ ಮುಖಗಳಿಂದ ನನಗೆ ದಿಗಿಲಾಗಲಿಲ್ಲ. ಬದಲು ಯಾವುದೋ ಹೊಸ ಅನುಭವವಾಗುತ್ತಿತ್ತು.

ಆ ಮಹಾನಗರಕ್ಕೆ ಬಂದಿಳಿದಾಗ ಕತ್ತಲಾಗಿತ್ತು. ನಿಲ್ದಾಣದ ಹೊರಗೆ, ಉದ್ದಕ್ಕೂ ಮೈಮುಚ್ಚದೆ ಮಲಗಿದ್ದ ಹಲವಾರು ಜನರ ನಡುವೆ ನಾನೂ ಒಬ್ಬನಾಗಿ, ಕೈ ಚೀಲವನ್ನು ತಬ್ಬಿಕೊಂಡು, ಆ ರಾತ್ರೆಯನ್ನು ಕಳೆದೆ.

ಬೆಳಿಗ್ಗೆ ಎದ್ದಾಗ ತುಂಬಾ ಹಸಿವಾಗಿತ್ತು. ಅಲ್ಲಿಯೇ ಒಂದು ಅಂಗಡಿಗೆ ಹೋಗಿ ಬೊಂಬಾಯಿ ಚಹಾದ ಪರಿಚಯ ಮಾಡಿಕೊಂಡೆ. ಅಜ್ಜಿಯ ತಿಂಡಿಪೊಟ್ಟಣವನ್ನು ಬಿಚ್ಚಿದೆ. ಅಲ್ಲಿ ಕೋಡುಬಳೆಗಳ ನಡುವೆ ಐದು ರೂಪಾಯಿನ್ ನಾಲ್ಕು ನೋಟುಗಳು ಎಣ್ಣೆ ಸವರಿಕೊಂಡು ಮುದುಡಿಕುಳಿತ್ತಿದ್ದವು! ನನ್ನ ಅಜ್ಜಿ--

ಅಲ್ಲಿ ಒಬ್ಬರನ್ನೊಬ್ಬರು, ಏನು ಯಾರೆಂದು ವಿಚಾರಿಸುತ್ತಿರಲಿಲ್ಲ. ಆ ಟ್ರಾಂಗಳ ರೈಲುಗಳ ಕಾರ್ ಮೋಟಾರುಗಳ ಜನಜಂಗುಳಿಯ ಗೊಂದಲದಲ್ಲಿ ಮಾನವ ಪ್ರಾಣಿಗೆ ಯಾರೂ ಮಹತ್ವಕೊಡುತ್ತಿರಲಿಲ್ಲ. ನಾನು ಗಲಿವರನ ಪ್ರವಾಸದ ಕತೆಯನ್ನೋದಿದ್ದೆ. ಲಿಲ್ಲಿಪುಟ್ಟಿನ ಪುಟ್ಟ ಜನರ ಬಗ್ಗೆ ತಿಳಿದಿದ್ದೆ. ಈ ನಗರದ ಜನರೆಲ್ಲಾ ಕಿರಿಮಾನವರ ಹಾಗೆ ಕಾಣುಬರುತ್ತಿದ್ದರು. ಆದರೆ ನಾನು ಗಲಿವರನಾಗಿರಲಿಲ್ಲ. ಆ ಮಾನವರಲ್ಲೊಬ್ಬನಾಗಿದ್ದೆ.