ಪುಟ:Vimoochane.pdf/೧೦೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಹೇಳುತ್ತಿದ್ದ. ಕಳ್ಳ ಸಿ.ಐ.ಡಿ.ಗಳಿಗೆ ಗಸ್ತುಕೊಟ್ಟು ಓಡಿ ಹೋಗು ವುದನ್ನು ಬಾರಿ ಬಾರಿಗೂ ವರ್ಣಿಸುತ್ತಿದ್ದ. ಆದರೆ ಕಾದಂಬರಿಗಳಲ್ಲಿ ಸಿ.ಐ.ಡಿಗಳಿಗೇ ಜಯವಾಗುವುದಲ್ಲವೆ? ಅದಕ್ಕೆ ಆತ ಸಮಾಧಾನ

ಹೇಳುತ್ತಿದ್ದ.

"ನಿನಗೆ ತಿಳೀದು ಶೇಖರ್, ಈ ಪುಸ್ತಕ ಬರೆದು ಅಚ್ಚು ಹಾಕಿಸೋರೆಲ್ಲಾ ಸಿ.ಐ.ಡಿ.ಕಡೆಯವರು. ತಮಗೆ ಸೋಲಾಗುತ್ತೇಂತ ಅವರು ಯಾವತ್ತಾದರೂ ಒಪ್ಕೊಂಡಾರ?"

ಮುಂಬಯಿ ನಗರದಲ್ಲಿ ಶೇಖರನಾಗಿ ಮೆಲ್ಲನೆ ಮಾರ್ಪಟ್ಟ ನಾನು ಆ ಮಾತು ಕೇಳಿ ಮುಗುಳ್ನಕ್ಕು ಸುಮ್ಮನಾಗುತ್ತಿದ್ದೆ.

ಒಮ್ಮೆ ಆತ, ಯಾವಳೋ ಶ್ರೀಮಂತ ಯುವತಿಯ ಕಾರಿನ ಕೆಳಗೆ ಸಿಕ್ಕು, ಸುಂದರನಾದ ಬಡ ಯುವಕನೊಬ್ಬನ ಅದೃಷ್ಟ ಖುಲಾಯಿ ಸಿದ್ದನ್ನು ಹೇಳಿದ.

"ಅದು ಕತೆ ಅಲ್ವ?"

"ಛೆ! ಛೆ! ಕತೆ ಆದರೇನಂತೆ? ಹಾಗೆಲ್ಲಾ ಆಗ್ದೆ ಇದ್ರೆ ಕತೆ ಬರೀತಾರ?"

ನಾನು ಆತನಿಗೆ ಕಲ್ಪನೆಯ ಕುದುರೆಯನ್ನೇರಿ ಕವಿಗಳು ಮೂರು ಲೋಕ ಸಂಚಾರ ಮಾಡುವುದು ಉಂಟೆಂದು ಹೇಳಿದೆ. ಅವನ ಮನ ಸ್ಸಿಗೆ ನೋವಾಯಿತು.

"ಹಾಗೆ ಯಾಕಂತೀಯ? ಹೀಗೆ ಆಗ್ಲೇಬಾರದು ಅಂತ ಉಂಟೇನು?"

ಆಗಬಾರದೆಂದೇನೂ ಇರಲಿಲ್ಲ. ಆದರೆ ಹಾಗೆ ಆಗಲಿಲ್ಲ ಅಷ್ಟೆ. ಯಾವ ಶ್ರೀಮಂತ ಹುಡುಗಿಯ ಕಾರಿನ ಕೆಳಗೂ ನಾವು ಬೀಳಲಿಲ್ಲ. ನಮ್ಮ ಅದೃಷ್ಟ ಖುಲಾಯಿಸಲಿಲ್ಲ.

ಇನ್ನೊಂದು ದಿನ ಆತ, ತನ್ನ ಪ್ರೀತಿಪಾತ್ರನಾದ ಚಲಚ್ಚಿತ್ರ ನಾಯಕನ ಬಗ್ಗೆ ಹೇಳಿದ. ಅವನು ಚಿಲ್ಲರೆ ಸಾಮಾನು ಹರವಿ ಕೊಂಡು ನಾಲ್ಕು ಕಾಸು ಸಂಪಾದನೆಗಾಗಿ ಎಲ್ಲಿಯೊ ಬೀದಿಯ ಬಳಿಯಲ್ಲಿ ಕುಳಿತಿದ್ದಾಗ, ನಿರ್ಮಾಪಕರು ಅವನನ್ನು ನೋಡಿ ಕರೆ